Contact Mobile: 91 77603 97878, Land: 08256-295611/ 615/616

News and Events

ಡಾ| ಶತಾನಂದ ಪ್ರಸಾದ್ ರಾವ್ ಇವರಿಂದ ಯಶಸ್ವಿ ಶಸ್ತ್ರಚಿಕಿತ್ಸೆ- ದಂಪತಿಗಳಿಂದ ಸಮ್ಮಾನ

ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಎಂಡೋಸ್ಕೋಪಿಕ್ ಸ್ಪೈನ್ ಸರ್ಜರಿಯಲ್ಲಿ ಫೆಲೋಶಿಪ್ ಪಡೆದಿರುವ ಬೆನ್ನುಮೂಳೆ ಶಸ್ತ್ರಚಿಕಿತ್ಸಾ ತಜ್ಞರಾದ ಡಾ| ಶತಾನಂದ ಪ್ರಸಾದ್ ರಾವ್ ಇವರನ್ನು ವಸಂತಿ ರುಕ್ಮಯ ಗೌಡ ದಂಪತಿಗಳು ಸಮ್ಮಾನಿಸಿದರು.
2024ರಲ್ಲಿ ಕಾರು ಅಪಘಾತದಲ್ಲಿ ತನ್ನ ಎರಡು ಕಾಲುಗಳ ಮೂಳೆ ಮುರಿತಕ್ಕೆ ಒಳಗಾಗಿದ್ದ ವಸಂತಿ ಇವರು ಬೇರೆ-ಬೇರೆ ಕಡೆ ಚಿಕಿತ್ಸೆ ಪಡೆದು ಗುಣಮುಖರಾಗದೇ ಕಾಲುಗಳಲ್ಲಿ ಕೀವು ತುಂಬಿ ನರಕಯಾತನೆ ಅನುಭವಿಸಿದ್ದರು. ಕೆಲವು ತಿಂಗಳುಗಳ ಕಾಲ ಮಲಗಿದಲ್ಲಿಯೇ ಇದ್ದ ಇವರು ಗುಣಮುಖರಾಗುವ ಭರವಸೆಯನ್ನೆ ಕಳೆದುಕೊಂಡಿದ್ದರು. ಉಜಿರೆಯ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಖ್ಯಾತ ಮೂಳೆ ಶಸ್ತ್ರಚಿಕಿತ್ಸಾ ತಜ್ಞ ಡಾ| ಶತಾನಂದ ಪ್ರಸಾದ್ ರಾವ್ ಇವರನ್ನು ಭೇಟಿಯಾಗಿ ಚಿಕಿತ್ಸೆ ಪಡೆಯಲಾರಂಭಿಸಿದ್ದರು.
ರೋಗಿಗೆ ಈ ಹಿಂದೆ ಹಾಕಲಾಗಿದ್ದ ರಾಡ್‍ಗಳನ್ನು ತೆಗೆದು ಪ್ಲೇಟ್ ಅಳವಡಿಸಬೇಕಾಗಿತ್ತು. ಸಮಸ್ಯೆ ತುಂಬಾ ಗಂಭೀರವಾಗಿದ್ದು, ಶಸ್ತ್ರಚಿಕಿತ್ಸೆ ಮಾಡುವುದು ವೈದ್ಯರಿಗೆ ಒಂದು ಸವಾಲಾಗಿತ್ತು. ರೋಗಿ ಮತ್ತು ಆಕೆಯ ಮನೆಯವರಿಗೆ ಧೈರ್ಯ ತುಂಬಿದ ಇಲ್ಲಿನ ವೈದ್ಯರು ಯಶಸ್ವಿಯಾಗಿ ಈ ಶಸ್ತ್ರಚಿಕಿತ್ಸೆಯನ್ನು ನಡೆಸಿದ್ದರು.
ಪ್ರಸ್ತುತ ರೋಗಿಯು ಚೇತರಿಸಿಕೊಂಡಿದ್ದು, ತನ್ನ ನಿತ್ಯದ ಕೆಲಸ ಕಾರ್ಯಗಳನ್ನು ನಡೆಸಲು ಸಮರ್ಥರಾಗಿದ್ದಾರೆ. ಇವರ ಪತಿ ಕೂಡ ಇದೇ ವೈದ್ಯರಿಂದ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದು, ತಮ್ಮ ಆರೋಗ್ಯವನ್ನು ಸುಧಾರಿಸಿದ ವೈದ್ಯರ ಸೇವೆಗೆ ತೃಪ್ತರಾಗಿ ಸಮ್ಮಾನಿಸಿ ಕೃತಜ್ಞತೆ ಸಲ್ಲಿಸಿದರು.
ರುಕ್ಮಯ ಗೌಡ ಅವರು ಮಾತನಾಡಿ, ಉಜಿರೆ ಎಸ್.ಡಿ.ಎಂ ಆಸ್ಪತ್ರೆ ಕೇವಲ ಒಂದು ಆಸ್ಪತ್ರೆಯಲ್ಲ. ಡಾ| ಶತಾನಂದ ಪ್ರಸಾದ್ ರಾವ್ ಇವರು ನಮ್ಮ ಪಾಲಿಗೆ ದೇವರಾಗಿದ್ದಾರೆ. ಇಲ್ಲಿ ಪ್ರತಿಯೊಂದು ರೋಗಿಗಳಿಗೆ ವೈದ್ಯರು ತೋರಿಸುವ ಕಾಳಜಿ, ಸಿಬ್ಬಂದಿಗಳ ಪ್ರೀತಿ ಮತ್ತು ಆರೈಕೆಗಳಿಂದ ಒಂದು ಮನೆಯ ವಾತಾವರಣದಂತೆ ಇದೆ. ಡಾ. ಡಿ. ವೀರೇಂದ್ರ ಹೆಗ್ಗಡೆಯವರು ನಿರ್ಮಿಸಿದ ಈ ಆಸ್ಪತ್ರೆ ನಮ್ಮಂತಹ ಸಾವಿರಾರು ಜನರ ಪಾಲಿಗೆ ಮರುಜನ್ಮ ನೀಡುತ್ತಿದೆ. ಇಲ್ಲಿನ ವ್ಯವಸ್ಥಾಪಕ ನಿರ್ದೇಶಕರಾದ ಎಂ. ಜನಾರ್ದನ್ ಅವರ ಶ್ರಮ ಮತ್ತು ನೇತೃತ್ವದಲ್ಲಿ ಆಸ್ಪತ್ರೆಯು ಬೆಳೆಯುತ್ತಿದೆ. ಈ ಆಸ್ಪತ್ರೆಯಿಂದ ಲಕ್ಷಾಂತರ ರೋಗಿಗಳಿಗೆ ಪ್ರಯೋಜನವಾಗುತ್ತಿದೆ ಎಂದರು.
ಧರ್ಮೇಂದ್ರ ಕುಮಾರ್ ಅವರು ಸನ್ಮಾನ ಪತ್ರ ವಾಚಿಸುತ್ತಾ, ಡಾ| ಶತಾನಂದ ಪ್ರಸಾದ್ ರಾವ್ ತನ್ನ ಕಿರಿಯ ವಯಸ್ಸಿನಲ್ಲಿಯೇ ಯಶಸ್ವಿ ಶಸ್ತ್ರಚಿಕಿತ್ಸೆಗಳಿಂದ ಜನಪ್ರಿಯರಾಗಿದ್ದಾರೆ. 1500ಕ್ಕೂ ಹೆಚ್ಚು ಮೂಳೆ ಶಸ್ತ್ರಚಿಕಿತ್ಸೆಗಳನ್ನು ಹಾಗೂ 400ಕ್ಕೂ ಹೆಚ್ಚು ಎಂಡೋಸ್ಕೋಪಿಕ್ ಸರ್ಜರಿಗಳನ್ನು ಯಶಸ್ವಿಯಾಗಿ ನಡೆಸಿದ್ದಾರೆ. ಮಂಗಳೂರಿನ ಡಾ. ಮಹೇಶ್. ಕೆ ಜತೆಗೂಡಿ ಇವರು ನಡೆಸಿದ ವಿಶ್ವದ ಮೊದಲ ಇಂಟ್ರಡ್ಯೂರಲ್ ಸ್ಪೈನಲ್ ಟ್ಯೂಮರ್ ಶಸ್ತ್ರಚಿಕಿತ್ಸೆ ವಿಶ್ವಮಟ್ಟದಲ್ಲಿ ಗುರುತಿಸಲ್ಪಟ್ಟಿತ್ತು ಎಂದರು.
ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್ ಅವರು ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ ಡಾ| ಶತಾನಂದ ಪ್ರಸಾದ್ ರಾವ್ ಇವರಿಗೆ ವಿಶೇಷ ಅಭಿನಂದನೆ ಸಲ್ಲಿಸಿದರು. ಶಸ್ತ್ರಚಿಕಿತ್ಸೆಗೆ ಒಳಗಾದ ವಸಂತಿ ಇವರು ಶೀಘ್ರವಾಗಿ ಸಂಪೂರ್ಣ ಗುಣಮುಖರಾಗಲಿ ಎಂದು ಶುಭ ಹಾರೈಸಿದರು. ಬಳಿಕ ಮಾತನಾಡಿದ ಅವರು ನಮ್ಮೆಲ್ಲಾ ಹೆಮ್ಮೆಯ ವೈದ್ಯರು ಮತ್ತು ಎಲ್ಲಾ ಸಿಬ್ಬಂದಿಗಳ ಒಗ್ಗಟ್ಟಿನ ಸೇವೆಯಿಂದ ರೋಗಿಗಳಿಗೆ ಈ ಆಸ್ಪತ್ರೆಯಲ್ಲಿ ಒಂದು ಕುಟುಂಬದ ಅನುಭವ ಮೂಡುವಂತಾಗಿದೆ. ಡಾ| ಡಿ. ವೀರೇಂದ್ರ ಹೆಗ್ಗಡೆಯವರು, ಮಾತೃಶ್ರೀ ಹೇಮಾವತಿ ವಿ. ಹೆಗ್ಗಡೆಯವರು, ಸುರೇಂದ್ರ ಕುಮಾರ್ ಸರ್ ದಂಪತಿಗಳು, ಹರ್ಷೇಂದ್ರ ಕುಮಾರ್ ಸರ್ ದಂಪತಿಗಳು, ರಾಜೇಂದ್ರ ಕುಮಾರ್ ಸರ್ ದಂಪತಿಗಳು ಮತ್ತು ಹೆಗ್ಗಡೆ ಕುಟುಂಬದ ಎಲ್ಲರ ಸಹಕಾರದಿಂದ ಈ ಆಸ್ಪತ್ರೆಯಲ್ಲಿ ಹೈಟೆಕ್ ವೈದ್ಯಕೀಯ ಸೇವೆ ನೀಡಲು ಸಾಧ್ಯವಾಗಿದೆ. ಇವರ ಸಹಕಾರ ಮತ್ತು ಮಾರ್ಗದರ್ಶನದಿಂದ ಇಲ್ಲಿನ ನುರಿತ ತಜ್ಞ ವೈದ್ಯರಿಂದ ಯಶಸ್ವಿ ಶಸ್ತ್ರಚಿಕಿತ್ಸೆಗಳು ನಡೆಯುತ್ತಿದೆ ಎಂದರು.
ರುಕ್ಮಯ ಗೌಡ, ಶ್ರೀಮತಿ ವಸಂತಿ ಹಾಗೂ ಕು| ಸ್ವಪ್ನ, ನರ್ಸಿಂಗ್ ಅಧೀಕ್ಷಕಿ ಶ್ರೀಮತಿ ಶೆರ್ಲಿ, ಮಾನವ ಸಂಪನ್ಮೂಲ ವಿಭಾಗದ ಶ್ರೀಮತಿ ಶ್ವೇತಾ ಕುಮಾರಿ, ಪಿ.ಸಿ.ಸಿ ಶ್ರೀಮತಿ ಹೇಮಾವತಿ. ಐ, ವಿಮಾ ವಿಭಾಗದ ಶ್ರೀಮತಿ ದಾಕ್ಷಾಯಿಣಿ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು. ಧರ್ಮೇಂದ್ರ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಜಗನ್ನಾಥ ಎಂ. ಧನ್ಯವಾದ ಅರ್ಪಿಸಿದರು.

News and Events

Related News