News and Events
ಮನೆಯವರ ಕಾಳಜಿ ವಹಿಸುವ ಮಹಿಳೆ ತನ್ನ ಆರೋಗ್ಯದ ಕಾಳಜಿ ವಹಿಸುವುದು ಅತೀ ಮುಖ್ಯ-ಸಿಕೆ ರೋಹಿಣಿಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಉಚಿತ ಸ್ತ್ರೀರೋಗ ತಪಾಸಣಾ ಶಿಬಿರ
ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಮತ್ತು ಹೇಮಾವತಿ ವಿ. ಹೆಗ್ಗಡೆಯವರ ಶುಭಾಶೀರ್ವಾದ ಗಳೊಂದಿಗೆ ಡಿ. ಹರ್ಷೇಂದ್ರ ಕುಮಾರ್ ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ್ ಮಾರ್ಗದರ್ಶನದಲ್ಲಿ ಜೂ.21 ರಂದು ಉಚಿತ ಸ್ತ್ರೀರೋಗ ತಪಾಸಣಾ ಶಿಬಿರ ನಡೆಯಿತು. ಶಿಬಿರವನ್ನು ಬೆಳ್ತಂಗಡಿ ಪೊಲೀಸ್ ಉಪ ಅಧೀಕ್ಷಕರಾದ ಶ್ರೀಮತಿ ಸಿ. ಕೆ ರೋಹಿಣಿ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು ಕುಟುಂಬದಲ್ಲಿ ಅತೀ ಹೆಚ್ಚು ನಿರ್ಲಕ್ಷಕ್ಕೆ ಒಳಗಾಗುವರು ಮಹಿಳೆಯರು. ಮನೆಯಲ್ಲಿ ಮಹಿಳೆಯರು ಮಾಡುವ ಕೆಲಸಗಳು ಮತ್ತು ಆಕೆಯ ಬೆಲೆ ಗೊತ್ತಾಗುವುದು ಆಕೆ ಇಲ್ಲದಿದ್ದಾಗ ಮಾತ್ರ. ತನ್ನ ಪರಿವಾರದ ಬಗ್ಗೆ ಕಾಳಜಿ ವಹಿಸುವ ಮಹಿಳೆಯರು ತನ್ನ ಆರೋಗ್ಯ ಸಮಸ್ಯೆಯ ಬಗ್ಗೆ ಹೇಳಿಕೊಳ್ಳಲು ಸಂಕೋಚ ಪಡುತ್ತಾರೆ. ಅವರ ಆರೋಗ್ಯದ ಬಗ್ಗೆ ಅವರೇ ನಿರ್ಲಕ್ಷ ಮಾಡುತ್ತಾ, ತೀರಾ ಹದಗೆಟ್ಟಾಗ ಮಾತ್ರ ವೈದ್ಯರ ಬಳಿ ಹೋಗ್ತಾರೆ. 40 ರಿಂದ 50 ರ ವಯಸ್ಸಿನ ಮಹಿಳೆಯರು ಮುಟ್ಟು ನಿಲ್ಲುವ ಸಂದರ್ಭದಲ್ಲಿ ತಮ್ಮ ಆರೋಗ್ಯದ ಬಗ್ಗೆ ಅತೀ ಹೆಚ್ಚು ಕಾಳಜಿ ವಹಿಸಬೇಕು. ಡಾ. ಡಿ. ವೀರೇಂದ್ರ ಹಗ್ಗಡೆಯವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯು ಹಲವಾರು ಉಚಿತ ಶಿಬಿರಗಳನ್ನು ಆಯೋಜಿಸುವ ಮೂಲಕ ಜನರ ಆರೋಗ್ಯದ ಕಾಳಜಿ ವಹಿಸುತ್ತಿದೆ. ಇಂತಹ ಶಿಬಿರಗಳಲ್ಲಿ ಮಹಿಳೆಯರು ಭಾಗವಹಿಸುವ ಮೂಲಕ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ ಜನಾರ್ದನ್ ಮಾತನಾಡಿ, ಮನೆಯವರ ಆರೋಗ್ಯದ ಬಗ್ಗೆ ಯೋಚಿಸುವ ಮಹಿಳೆಯರು ಅವರ ಆರೋಗ್ಯದ ಪ್ರಶ್ನೆ ಬಂದಾಗ ನಾಳೆ ಹೋದರಾಯಿತು. ನಾಡಿದು ಹೋದರಾಯಿತು ಅಂತ ಹಿಂದೆ ಹಾಕ್ತಾರೆ. ಇದು ಅವರ ಆರೋಗ್ಯದ ಸಮಸ್ಯೆಗೆ ಕಾರಣವಾಗುತ್ತದೆ. ಜನರ ಆರೋಗ್ಯದ ಬಗ್ಗೆ ಪೂಜ್ಯರ ಕಾಳಜಿಯ ಕಾರಣದಿಂದ ನಾವು ತಿಂಗಳಲ್ಲಿ 3 ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಮಾಡುತ್ತಿದ್ದೇವೆ. ಆಸ್ಪತ್ರೆಯಲ್ಲಿ ಒಂದು ಕ್ಯಾಂಪ್ ಹಾಗೂ ವೈದ್ಯರ ಅನುಕೂಲತೆ ಇಲ್ಲದ ಹಳ್ಳಿ ಪ್ರದೇಶದಲ್ಲಿ ಎರಡು ಕ್ಯಾಂಪುಗಳನ್ನು ಆಯೋಜಿಸಲಾಗುತ್ತದೆ. ಇದರಿಂದ ಹಲವಾರು ಜನರ ರೋಗ ಲಕ್ಷಣಗಳನ್ನು ಪ್ರಾರಂಭದಲ್ಲಿಯೇ ಪತ್ತೆ ಹಚ್ಚಲಾಗಿದೆ ಎಂದರು.
ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಾದ ಡಾ| ಸ್ವರ್ಣಲತ ಇವರು ಮಾತನಾಡಿ ಭಾರತದಲ್ಲಿ ಸ್ತನದ ಕ್ಯಾನ್ಸರ್ ಅತೀ ಹೆಚ್ಚು ಇದೆ. 3 ವರ್ಷಕ್ಕೊಮ್ಮೆ ಮಹಿಳೆಯರು ಗರ್ಭಕಂಠ ಮತ್ತು ಗರ್ಭಾಶಯದ ತಪಾಸಣೆಗಳನ್ನು ನಡೆಸುವುದು ಅತ್ಯಗತ್ಯ. ಸ್ತನದ ತಪಾಸಣೆಯನ್ನು ತಾವೇ ಮಾಡಿಕೊಳ್ಳಬಹುದಾಗಿದೆ. ಸ್ತನದಲ್ಲಿ ಗಂಟು ಕಂಡುಬಂದರೆ ತಡಮಾಡದೇ ವೈದ್ಯರನ್ನು ಸಂಪರ್ಕಿಸಬೇಕು ಎಂದರು.
ಆಸ್ಪತ್ರೆಯ ಮತ್ತೋರ್ವ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಾದ ಡಾ| ಪ್ರಿಯಾಂಕ ಜಯದೇವ್ ಮಾತನಾಡಿ, ಉಜಿರೆ ಎಸ್.ಡಿ.ಎಂ ಆಸ್ಪತೆಯಲ್ಲಿ ಲ್ಯಾಪರೋಸ್ಕೋಪಿಕ್ ಶಸ್ತ್ರಚಿಕಿತ್ಸೆಯ ಸೌಲಭ್ಯ ಇದ್ದು, ಅಂಡಾಶಯದ ಗಡ್ಡೆಗಳನ್ನು ಲ್ಯಾಪರೋಸ್ಕೋಪಿಕ್ ಶಸ್ತ್ರಚಿಕಿತ್ಸೆಯ ಮೂಲಕ ಅಂಡಾಶಯದ ಸುತ್ತಲಿನ ಆರೋಗ್ಯವಂತ ಅಂಗಾಂಶಗಳಿಗೆ ಹಾನಿಯಾಗದಂತೆ ತೆಗೆದುಹಾಕಬಹುದು. ಈ ಶಸ್ತ್ರಚಿಕಿತ್ಸೆಯಿಂದ ರೋಗಿ ಬಹಳ ಬೇಗ ಚೇತರಿಸಿಕೊಳ್ಳುತ್ತಾರೆ ಎಂದರು.
200 ಕ್ಕೂ ಹೆಚ್ಚು ಮಂದಿ ಈ ಶಿಬಿರದ ಉಪಯೋಗ ಪಡೆದುಕೊಂಡರು. ಮಾರ್ಕೆಟಿಂಗ್ ವಿಭಾಗದ ಭವಿಷ್ಯ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಮಾರ್ಕೆಟಿಂಗ್ ಎಕ್ಷ್ಕ್ಯೂಟಿವ್ ಸುಮಂತ್ ರೈ ಸಹಕರಿಸಿದರು.
























