News and Events
ಶಸ್ತ್ರಚಿಕಿತ್ಸೆಯಲ್ಲಿ ಐತಿಹಾಸಿಕ ಸಾಧನೆ ಉಜಿರೆಯ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ವಿಶ್ವದ ಮೊದಲ ಸಂಪೂರ್ಣ ಬೆನ್ನು ಮೂಳೆಯ ಗೆಡ್ಡೆ ತೆಗೆಯುವಿಕೆ ಮತ್ತು ಡ್ಯೂರಲ್ದು ರಸ್ತಿ ಶಸ್ತ್ರಚಿಕಿತ್ಸೆ ಯಶಸ್ವಿ: ಹೆಗ್ಗಡೆ ಅವರಿಂದ ವೈದ್ಯರಿಗೆ ಸನ್ಮಾನ
ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ವಿಶ್ವದ ಮೊದಲ ಸಂಪೂರ್ಣ ಬೆನ್ನುಮೂಳೆಯ ಗೆಡ್ಡೆ ತೆಗೆಯುವಿಕೆ ಮತ್ತು ಯಶಸ್ವಿ ಡ್ಯೂರಲ್ ದುರಸ್ತಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆದಿದ್ದು, ಈ ಸಾಧನೆ ಮಾಡಿದ ಆಸ್ಪತ್ರೆಯ ವೈದ್ಯರಾದ ಡಾ. ಮಹೇಶ್ ಕೆ. ಮತ್ತು ಡಾ. ಶತಾನಂದ ಪ್ರಸಾದ್ ರಾವ್ ಹಾಗೂ ಅವರ ತಂಡವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ದಂಪತಿ ಆಸ್ಪತ್ರೆಯಲ್ಲಿ ಇಂದು (ಜ. 27) ಸನ್ಮಾನಿಸಿದರು.
ಆಸ್ಪತ್ರೆಯಲ್ಲಿ ಜ. 1ರಿಂದ ಉಚಿತ ಡಯಾಲಿಸಿಸ್ ಸೇವೆ ಕೂಡ ಆರಂಭವಾಗಿದ್ದು, ಈಗ ವಿಶೇಷ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸುವುದರ ಮೂಲಕ ಆಸ್ಪತ್ರೆ ಸಾಧನೆ ಮಾಡಿದೆ.
ಡಾ. ಹೆಗ್ಗಡೆ ಅವರು ಮಾತನಾಡಿ, “ಧಾರವಾಡದ ಮೆಡಿಕಲ್ ಕಲ್ಪನೆ ಇಟ್ಟುಕೊಂಡು ಉಜಿರೆಯಲ್ಲಿ ಕೂಡ ಆಸ್ಪತ್ರೆ ಆರಂಭಿಸಿದೆವು. ಉಜಿರೆಯಲ್ಲಿರುವ ನಮ್ಮ ಸಣ್ಣ ಆಸ್ಪತ್ರೆಯಲ್ಲಿನ ವೈದ್ಯರು ಈಗ ದೊಡ್ಡ ಸಾಧನೆ ಮಾಡಿರುವುದು ನನಗೆ ಸಂತಸ ತಂದಿದೆ” ಎಂದರು.
ಇಂತಹ ಶಸ್ತ್ರಚಿಕಿತ್ಸೆಯನ್ನು ಹಳ್ಳಿಗಳಲ್ಲಿ ಮಾಡಲು ಹೆದರುತ್ತಾರೆ. ಮಂಗಳೂರಿಗೆ ಹೋಗುತ್ತಾರೆ. ಆದರೆ ಹಳ್ಳಿಯಲ್ಲಿ ಈ ರೀತಿಯ ಶಸ್ತ್ರಚಿಕಿತ್ಸೆಗಳು ಆಗುವ ಮೂಲಕ ಜನರಲ್ಲಿ ಇರುವ ಭಯ ದೂರವಾಗುತ್ತದೆ. ಅಲ್ಲದೇ ಗ್ರಾಮೀಣ ಪ್ರದೇಶದಲ್ಲಿರುವ ಆಸ್ಪತ್ರೆಗಳ ಮೇಲೆ ನಂಬಿಕೆ ಉಳಿಯುತ್ತದೆ – ಡಾ. ಡಿ. ವೀರೇಂದ್ರ ಹೆಗ್ಗಡೆ
ಮಾತೃಶ್ರೀ ಹೇಮಾವತಿ ವೀ. ಹೆಗ್ಗಡೆ ಅವರು ಮಾತನಾಡಿದರು. “ಧರ್ಮಸ್ಥಳದಲ್ಲಿ ಪವಾಡಗಳು ನಡೆಯುವುದು ನಾವು ಕೇಳಿದ್ದೇವೆ, ನೋಡಿದ್ದೇವೆ. ಉಜಿರೆಯ ಆಸ್ಪತ್ರೆಯಲ್ಲೂ ಇಂತಹ ಪವಾಡ ಮತ್ತು ಮ್ಯಾಜಿಕ್ ನಡೆದಿರುವುದು ನಿಜಕ್ಕೂ ಸಂತಸ ತಂದಿದೆ” ಎಂದರು. ವೈದ್ಯರು ಮತ್ತು ತಂಡವನ್ನು ಅಭಿನಂದಿಸಿದರು.
ವೈದ್ಯ ಡಾ. ಶತಾನಂದ ಪ್ರಸಾದ್ ರಾವ್ ಮಾತನಾಡಿ, ಸಾಮಾನ್ಯವಾಗಿ ಹಳೆಯ ವಿಧಾನದೊಂದಿಗೆ ಶಸ್ತ್ರಚಿಕಿತ್ಸೆ ನಡೆದರೆ ಹೆಚ್ಚಿನ ಗಾಯ ಮತ್ತು ವಿವಿಧ ನರಗಳಿಗೆ ಹಾನಿಯಾಗುವ ಸಾಧ್ಯತೆಗಳಿರುತ್ತವೆ. ಆದರೆ ಎಸ್ ಡಿ ಎಂ ಆಸ್ಪತ್ರೆಯಲ್ಲಿ ನಡೆದ ಎಂಡೋಸ್ಕೋಪಿಕ್ ಶಸ್ತ್ರಚಿಕಿತ್ಸೆಯಲ್ಲಿ ಒಂದೇ ದಿನದಲ್ಲಿ ವೃದ್ಧೆ ಮತ್ತೆ ನಡೆಯುವಂತಾಗಿದೆ. ಶಸ್ತ್ರಚಿಕಿತ್ಸೆ ನಡೆದ ಬಳಿಕ ಡ್ಯೂರಲ್ ಹಾನಿಯನ್ನು ಸರಿಪಡಿಸಲು ಹೊಲಿಗೆ ವಿಶ್ವದ ಯಾವ ಆಸ್ಪತ್ರೆಯಲ್ಲೂ ಯಶಸ್ವಿಯಾಗಿಲ್ಲ. ಆದರೆ ಎಸ್ ಡಿ ಎಂ ಆಸ್ಪತ್ರೆಯಲ್ಲಿ ಮೊದಲ ಬಾರಿಗೆ ಯಶಸ್ವಿಯಾಗಿ ಹೊಲಿಗೆ ಹಾಕಲಾಗಿದೆ ಎಂದು ತಿಳಿಸಿದರು.
65 ವರ್ಷದ ಧರ್ಣಮ್ಮ ಎಂಬ ವೃದ್ಧೆ ಸಹಿಸಲು ಅಸಾಧ್ಯವಾದ ಬೆನ್ನುನೋವಿನಿಂದ ಬಳಲುತ್ತಿದ್ದರು. ಉಜಿರೆಯ ಎಸ್ ಡಿ ಎಂ ಆಸ್ಪತ್ರೆಗೆ ಬಂದಾಗ ಬೆನ್ನುಮೂಳೆಯ ಪರಿಶೀಲನೆ ನಡೆಸಿದೆವು. ಎಂ.ಆರ್.ಐ. ಮೂಲಕ ಗೆಡ್ಡೆ ಇರುವುದು ಪತ್ತೆಯಾಯಿತು. ಡಾ. ಮಹೇಶ್ ನೇತೃತ್ವದ ತಂಡ ಆರು ಗಂಟೆಯ ಸತತ ಶಸ್ತ್ರಚಿಕಿತ್ಸೆಯಲ್ಲಿ ಮೊದಲ ಬಾರಿಗೆ ಎಂಡೋಸ್ಕೋಪಿಕ್ ಚಿಕಿತ್ಸೆ ಮಾಡಲಾಗಿದ್ದು, ಕೇವಲ ಒಂದು ಸೆಂಟಿಮೀಟರ್ ಛೇದನದೊಂದಿಗೆ ಮೂರು ಸೆಂಟಿಮೀಟರ್ ಗೆಡ್ಡೆಯನ್ನು ಹೊರತೆಗೆಯಲಾಗಿದೆ. ಎಂಡೋಸ್ಕೋಪಿಕ್ ಚಿಕಿತ್ಸೆ ಕನಿಷ್ಠ ರಕ್ತದ ನಷ್ಟದೊಂದಿಗೆ ಯಾವುದೇ ಅಂಗಾಂಶ ಹಾನಿಯಾಗದಂತೆ ಮಾಡಲಾಗಿದೆ – ಡಾ. ಶತಾನಂದ ಪ್ರಸಾದ್ ರಾವ್