News and Events
ತಣ್ಣೀರುಪಂತ: ಉಚಿತ ಆರೋಗ್ಯ ತಪಾಸಣಾ ಶಿಬಿರ
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆ ಉಜಿರೆ ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಣ್ಣೀರುಪಂತ ವಲಯ, ಪ್ರಗತಿಬಂಧು ಒಕ್ಕೂಟಗಳು ತಣ್ಣೀರುಪಂತ ವಲಯ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ತಣ್ಣೀರುಪಂತ ವಲಯ, ಎಸ್.ಡಿ.ಎಂ.ಸಿ ಹಾಗೂ ಹಳೆ ವಿದ್ಯಾರ್ಥಿ ಸಂಘ ದ.ಕ.ಜಿ.ಉ.ಹಿ.ಪ್ರಾ.ಶಾಲೆ ತಣ್ಣೀರುಪಂತ ಮತ್ತು ಶ್ರೀ ಶಾರದಾಂಬ ಯುವಕ ಮಂಡಲ ತಣ್ಣೀರುಪಂತ ಇವರ ಸಹಕಾರದೊಂದಿಗೆ ತಣ್ಣೀರುಪಂತ ಶಾಲಾ ವಠಾರದಲ್ಲಿ ಫೆ. 7ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.
ಕಾರ್ಯಕ್ರಮವನ್ನು ಇಲ್ಲಿನ ಉದ್ಯಮಿ ಮಾಧವ ಜೋಗಿತ್ತಾಯ ಇವರು ಉದ್ಘಾಟಿಸಿ ಮಾತನಾಡುತ್ತಾ, ಪರಮಪೂಜ್ಯ ಡಾ. ವೀರೇಂದ್ರ ಹೆಗ್ಗಡೆಯವರು ಜನರ ಆರೋಗ್ಯ ಮತ್ತು ಆರ್ಥಿಕ ಅಭಿವೃದ್ಧಿಗೆ ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದ್ದಾರೆ. ಅನೇಕ ಶಿಬಿರಗಳನ್ನು ಆಯೋಜಿಸಿ ವೈದ್ಯಕೀಯ ಸೇವೆ ನೀಡುತ್ತಿದ್ದಾರೆ. ಸಾರ್ವಜನಿಕರು ಈ ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ವಿನಂತಿಸಿದರು.
ಉಜಿರೆ ಎಸ್.ಡಿ.ಎಂ ಆಸ್ಪತ್ರೆಯ ವೈದ್ಯಾಧಿಕಾರಿ ಡಾ| ಎಂ. ಕಾಶೀನಾಥ ಶೆಣೈ ಮಾತನಾಡಿ ಉಜಿರೆ ಎಸ್.ಡಿ.ಎಂ ಆಸ್ಪತ್ರೆಯಲ್ಲಿ ಪೂಜ್ಯ ಹೆಗ್ಗಡೆಯವರ ಆಶಯ ಮತ್ತು ಆದೇಶದಂತೆ ಅತ್ಯಾಧುನಿಕ ತಂತ್ರಜ್ಞಾನವಿರುವ ವೈದ್ಯಕೀಯ ಸೇವಾ ಸೌಲಭ್ಯಗಳೊಂದಿಗೆ ತಜ್ಞ ವೈದ್ಯರ ತಂಡ ವೈದ್ಯಕೀಯ ಸೇವೆ ನೀಡಲಾಗುತ್ತಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಭಾಕರ ಪೋಸಂದೋಡಿ ಅಧ್ಯಕ್ಷರು, ಬೆಳ್ತಂಗಡಿ ತಾಲೂಕು ಪ್ರಗತಿ ಬಂಧು ಕೇಂದ್ರ ಒಕ್ಕೂಟ ಇವರು ಮಾತನಾಡಿ, ಜನರ ಆರೋಗ್ಯ ಸೇವೆಗೆ ಅತ್ಯಂತ ಮಹತ್ವ ನೀಡುತ್ತಿರುವ ಪೂಜ್ಯ ಹೆಗ್ಗಡೆಯವರು ಸಂಚಾರಿ ಆಸ್ಪತ್ರೆಯ ಮೂಲಕ ಹಳ್ಳಿ-ಹಳ್ಳಿಯ ಜನತೆಗೆ ಆರೋಗ್ಯ ಸೇವೆ ನೀಡಿರುವುದನ್ನು ತಾಲೂಕಿನ ಜನತೆ ಇಂದಿಗೂ ನೆನಪಿಸುತ್ತಿದ್ದಾರೆ. ಸುರಕ್ಷಾ ಆರೋಗ್ಯ ವಿಮೆ ವದಗಿಸುವ ಮೂಲಕ ರಾಜ್ಯಾದ್ಯಂತ ಬಡ ಜನತೆ ಉಚಿತವಾಗಿ ಮತ್ತು ಅತೀ ಕಡಿಮೆ ಖರ್ಚಿನಲ್ಲಿ ಆರೋಗ್ಯ ಸೇವೆ ಪಡೆಯುವಂತಾಗಿದೆ ಎಂದರು.
ಯೋಜನಾಧಿಕಾರಿ ಜಯಕರ ಶೆಟ್ಟಿಯವರು ಸುರಕ್ಷಾ ವಿಮೆಯಲ್ಲಿ ಸಿಗುವ ಪ್ರಯೋಜನ ಮತ್ತು ಪ್ರೀಮಿಯಂ ವಿವರ ನೀಡಿದರು.
ಶಿಬಿರದಲ್ಲಿ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆಯ ತಜ್ಞ ವೈದ್ಯರುಗಳಿಂದ ಹೃದಯ, ಕಿವಿ-ಮೂಗು-ಗಂಟಲು, ಕಣ್ಣು, ಸ್ತ್ರೀರೋಗ, ಎಲುಬು ಮತ್ತು ಮೂಳೆ, ಮಕ್ಕಳ ರೋಗ, ಸಾಮಾನ್ಯ ಆರೋಗ್ಯ ತಪಾಸಣೆ ನಡೆಸಲಾಯಿತು.
ವಲಯ ಮೇಲ್ವಿಚಾರಕಿ ವಿಧ್ಯಾ ಇವರು ಸ್ವಾಗತಿಸಿ, ಜ್ಞಾನ ವಿಕಾಸ ಸಂಯೋಜಕಿ ಹರಿಣಿ ಕಾರ್ಯಕ್ರಮ ನಿರೂಪಿಸಿದರು, ಸೇವಾ ಪ್ರತಿನಿಧಿ ಶೋಭಾ ಧನ್ಯವಾದ ಅರ್ಪಿಸಿದರು.
ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶ್ಯಾಮಲಾ, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳಾದ ದುಗ್ಗಪ್ಪ ಗೌಡ ಪೋಸಂದೋಡಿ, ಪೂವಪ್ಪ ಬಂಗೇರ ಅಳಕೆ, ಶ್ರೀಧರ ಕರ್ಕೆರ ಅಳಕೆ, ದೇಜಪ್ಪ ಪೂಜಾರಿ ಅಳಕೆ, ಮಿಥುನ್ ಮುಕಾರ್, ಯೋಗೀಶ್ ಅಳಕೆ ಉಪಸ್ಥಿತರಿದ್ದರು.