Contact Mobile: 91 77603 97878, Land: 08256-295611/ 615/616

News and Events

ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ದಾದಿಯರ ದಿನಾಚರಣೆ

ಸಂಬಂಧಿಕರೇ ಕೆಲವೊಂದು ರೋಗಿಗಳ ಶುಶ್ರೂಷೆ ಮಾಡಲು ಹಿಂಜರಿಯುತ್ತಾರೆ. ಆದರೆ ದಾದಿಯರು ಮತ್ತು ವೈದ್ಯರು ಅದನ್ನು ಕರ್ತವ್ಯದ ದೃಷ್ಟಿಯಿಂದ ಯಾವುದೇ ಹಿಂಜರಿಕೆ ಇಲ್ಲದೆ ರೋಗಿಗಳ ಸೇವೆ ಮಾಡುತ್ತಾರೆ.. ಮಧ್ಯರಾತ್ರಿಯೂ ನಿದ್ದೆ ಇಲ್ಲದೆ ರೋಗಿಗಳ ಸೇವೆ ಮಾಡುವ ದಾದಿಯರ ಸೇವೆ ನಿಜವಾಗಿಯೂ ಶ್ಲಾಘನೀಯ. ರೋಗಿಗಳ ಸೇವೆ ಮಾಡುವ ಎಲ್ಲಾ ದಾದಿಯರ ಬಗ್ಗೆ ಅತ್ಯಂತ ಹೆಚ್ಚು ಕಾಳಜಿ ಹೊಂದಿರುವ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಮತ್ತು ಹೇಮಾವತಿ ವಿ. ಹೆಗ್ಗಡೆ ಹಾಗೂ ಹರ್ಷೇಂದ್ರ ಕುಮಾರ್ ದಂಪತಿಗಳ ಶುಭಾಶೀರ್ವಾದ ದಾದಿಯರ ಪಾಲಿಗೆ ಸದಾ ಇದೆ ಎಂದು ಉಜಿರೆ ಎಸ್.ಡಿ.ಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ನಿರ್ದೇಶಕ ಎಂ. ಜನಾರ್ದನ್ ಹೇಳಿದರು.
ಅವರು ಉಜಿರೆ ಎಸ್.ಡಿ.ಎಂ ಆಸ್ಪತ್ರೆಯಲ್ಲಿ ಹಮ್ಮಿಕೊಳ್ಳಲಾದ ದಾದಿಯರ ದಿನಾಚರಣೆಯ ಪ್ರಯುಕ್ತ ದಾದಿಯರನ್ನು ಗೌರವಿಸಿ ಮಾತನಾಡುತ್ತಾ ವೈದ್ಯಕೀಯ ಕ್ಷೇತ್ರದ ಸೇವೆಯಲ್ಲಿ ಅತೀ ಹೆಚ್ಚು ಪ್ರಾಮುಖ್ಯತೆಯ ಸೇವೆ ದಾದಿಯರದ್ದು ಎಂದರು.
ವೈದ್ಯಕೀಯ ಅಧೀಕ್ಷಕ ಡಾ| ದೇವೇಂದ್ರ ಕುಮಾರ್. ಪಿ, ದಾದಿಯರಿಗೆ ಶುಭ ಹಾರೈಸಿದರು. ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ| ಸಾತ್ವಿಕ್ ಜೈನ್ ಶುಭ ಹಾರೈಸಿ ಮಾತನಾಡಿ, ವೈದ್ಯರಿಗೆ ರೋಗಿಗಳ ಸೇವೆ ಮಾಡಲು ದಾದಿಯರ ಸಹಾಯ ಅತ್ಯಂತ ಅಗತ್ಯ. ಅದರಲ್ಲೂ ನಮ್ಮ ಆಸ್ಪತ್ರೆಯ ದಾದಿಯರ ಸೇವೆ ಅಮೋಘವಾದದ್ದು ಎಂದರು.
ನರ್ಸಿಂಗ್ ಅಧೀಕ್ಷಕಿ ಶೆರ್ಲಿ ಇವರು ಎಲ್ಲಾ ದಾದಿಯರಿಗೆ ಕರ್ತವ್ಯದ ಪ್ರತಿಜ್ಞಾವಿಧಿ ಬೋಧಿಸಿ, ಮಾತನಾಡುತ್ತಾ, ದಾದಿಯರು ವೈದ್ಯಕೀಯ ಕ್ಷೇತ್ರದ ಬೆನ್ನೆಲುಬು, ಪೂಜ್ಯ ಹೆಗ್ಗಡೆಯವರು ಮತ್ತು ಅವರ ಪರಿವಾರದವರ ಪ್ರೀತಿ, ಇಲ್ಲಿನ ವ್ಯವಸ್ಥಾಪಕ ನಿರ್ದೇಶಕರ ಕಾಳಜಿ ಮತ್ತು ಪ್ರೋತ್ಸಾಹ, ವೈದ್ಯರ ಬೆಂಬಲದೊಂದಿಗೆ ಈ ಸಂಸ್ಥೆಯಲ್ಲಿ ದುಡಿಯುವ ಸದಾವಕಾಶ ನಮಗೆ ದೊರೆತಿದೆ. ಪೂಜ್ಯರ ಸಂಸ್ಥೆಯಲ್ಲಿ ಸೇವೆ ಸಲ್ಲಿಸುವುದೇ ನಮ್ಮೆಲ್ಲರ ಸೌಭಾಗ್ಯ ಎಂದರು.
ಇದೇ ಸಂದರ್ಭದಲ್ಲಿ ನರ್ಸಿಂಗ್ ಅಧೀಕ್ಷಕಿ ಶೆರ್ಲಿ ಇವರನ್ನು ಸನ್ಮಾನಿಸಲಾಯಿತು. ಎಲ್ಲಾ ದಾದಿಯರಿಗೆ ಉಡುಗೊರೆ ನೀಡಿ ಗೌರವಿಸಲಾಯಿತು. ಆಸ್ಪತ್ರೆಯ ವೈದ್ಯರು, ದಾದಿಯರು ಹಾಗೂ ಇತರ ಸಿಬ್ಬಂದಿ ಉಪಸ್ಥಿತರಿದ್ದರು.

News and Events

Related News