News and Events
ಉಜಿರೆ ಎಸ್.ಡಿ.ಎಂ. ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಎಂಡೋಸ್ಕೋಪಿಕ್ ಸ್ಪೈನಲ್ ಸರ್ಜರಿ
ಉಜಿರೆ, ಸೆ.7: ಬೆನ್ನುಮೂಳೆಯ ಸಮಸ್ಯೆಯಿಂದ ಬಳಲುತ್ತಿದ್ದ 19 ವರ್ಷದ ಯುವಕರೋರ್ವರಿಗೆ ಇಲ್ಲಿನ ಎಸ್.ಡಿ.ಎಂ. ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಸೆ.4ರಂದು ಎಂಡೋಸ್ಕೋಪಿಕ್ ಸ್ಪೈನಲ್ ಶಸ್ತ್ರಚಿಕಿತ್ಸೆ (Endoscopic Spinal Surgery) ಯನ್ನು ಯಶಸ್ವಿಯಾಗಿ ನಡೆಸಲಾಗಿದೆ.
ಬೆನ್ನುಮೂಳೆಯ ಅತ್ಯಾಧುನಿಕ ಶಸ್ತ್ರಚಿಕಿತ್ಸೆಯಾಗಿರುವ ಎಂಡೋಸ್ಕೋಪಿಕ್ ಸ್ಪೈನಲ್ ಸರ್ಜರಿಯಲ್ಲಿ ಹೆಚ್.ಡಿ. ಕ್ಯಾಮರಾ ಬಳಸಲಾಗುತ್ತದೆ. ಈ ಸರ್ಜರಿಯಲ್ಲಿ ರೋಗಿಗೆ ಅತೀ ಸಣ್ಣ ಗಾಯ, ಕಡಿಮೆ ರಕ್ತದ ನಷ್ಟ ಹಾಗೂ ಅತೀ ಕಡಿಮೆ ನೋವು ಉಂಟಾಗುತ್ತದೆ. 6 ಗಂಟೆಯಲ್ಲಿ ರೋಗಿ ನಡೆದಾಡಬಹುದಾಗಿದ್ದು, ಅತೀ ಕಡಿಮೆ ಅವಧಿಯಲ್ಲಿ ಚೇತರಿಸಿಕೊಳ್ಳಬಹುದಾಗಿದೆ.
ಬೆನ್ನುಮೂಳೆಯ ಶಸ್ತ್ರಚಿಕಿತ್ಸೆಯಲ್ಲಿ ಫೆಲೋಶಿಪ್ ಪಡೆದಿರುವ, ಕೈರೋದ ಪ್ರತಿಷ್ಠಿತ ಇಂಟರ್ ನ್ಯಾಷನಲ್ ಮಾಡ್ಯೂಯಲ್ ಸೆಂಟರ್’ನಲ್ಲಿ ಸರ್ಜನ್ ಆಗಿರುವ, 3,000ಕ್ಕಿಂತಲೂ ಹೆಚ್ಚು ಬೆನ್ನುಮೂಳೆ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ನಡೆಸಿರುವ ಖ್ಯಾತ ಬೆನ್ನುಮೂಳೆ ಶಸ್ತ್ರಚಿಕಿತ್ಸಕ ಡಾ| ಮಹೇಶ್ ಕೆ. ಹಾಗೂ ಉಜಿರೆ ಎಸ್.ಡಿ.ಎಂ. ಆಸ್ಪತ್ರೆಯ ಮೂಳೆ ಶಸ್ತ್ರಚಿಕಿತ್ಸಾ ತಜ್ಞ ಡಾ| ಶತಾನಂದ ಪ್ರಸಾದ್ ರಾವ್ ಈ ಶಸ್ತ್ರಚಿಕಿತ್ಸೆ ನಡೆಸಿದರು. ಅರಿವಳಿಕೆ ತಜ್ಞರಾದ ಡಾ| ಚೈತ್ರ ಆರ್. ಸಹಕರಿಸಿದರು.
ಹೈಟೆಕ್ ಆಸ್ಪತ್ರೆಗಳಲ್ಲಿ ದೊರೆಯುವ ವೈದ್ಯಕೀಯ ಸೇವೆ
ಈಗಾಗಲೆ ಎಸ್.ಡಿ.ಎಂ. ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕೀ ಹೋಲ್ ಸರ್ಜರಿ, ವಿಶೇಷ ಗಾತ್ರದ ಹಲವಾರು ಗರ್ಭಕೋಶದ ಗೆಡ್ಡೆಯ ಶಸ್ತ್ರಚಿಕಿತ್ಸೆ, ಗರ್ಭಕಂಠದ ಶಸ್ತ್ರಚಿಕಿತ್ಸೆ, ಆರ್ಥೋ ಸರ್ಜರಿ, ಸಂಪೂರ್ಣ ಮಂಡಿ ಬದಲಿ ಜೋಡಣಾ ಚಿಕಿತ್ಸೆ, ಸೊಂಟದ ಕೀಲು ಬದಲಿ ಜೋಡಣಾ ಚಿಕಿತ್ಸೆ ನಡೆಸಲಾಗುತ್ತಿದೆ. ಹೈಟೆಕ್ ಆಸ್ಪತ್ರೆಗಳಲ್ಲಿ ದೊರೆಯುವ ವೈದ್ಯಕೀಯ ಸೇವೆ ಹಾಗೂ ಸಂಕೀರ್ಣ ಶಸ್ತ್ರಚಿಕಿತ್ಸೆಗಳು ಗ್ರಾಮೀಣ ಜನತೆಗೆ ಮಿತದರದಲ್ಲಿ ಉಜಿರೆ ಎಸ್.ಡಿ.ಎಂ. ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ದೊರೆಯುವಂತೆ ಮಾಡಿದ ಕೀರ್ತಿ ಪೂಜ್ಯ ಡಾ| ಡಿ. ವೀರೇಂದ್ರ ಹೆಗ್ಗಡೆಯವರದ್ದು.
-ಎಂ. ಜನಾರ್ದನ್, ನಿರ್ದೇಶಕರು, ಎಸ್.ಡಿ.ಎಂ. ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆ, ಉಜಿರೆ
ಉಜಿರೆ ಎಸ್.ಡಿ.ಎಂ. ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕಿವಿ-ಮೂಗು-ಗಂಟಲು ತಜ್ಞರು, ಶಸ್ತ್ರಚಿಕಿತ್ಸಾ ತಜ್ಞರು, ಕಣ್ಣಿನ ತಜ್ಞರು, ಮಕ್ಕಳ ರೋಗ ತಜ್ಞರು, ಚರ್ಮರೋಗ ತಜ್ಞರು, 4 ಮಂದಿ ಎಂ.ಡಿ. ಫಿಸಿಷಿಯನ್, 3 ಮಂದಿ ಮೂಳೆ ಶಸ್ತ್ರಚಿಕಿತ್ಸಾ ತಜ್ಞರು, 3 ಮಂದಿ ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞರು ಹಾಗೂ ಇಬ್ಬರು ಅರಿವಳಿಕೆ ತಜ್ಞರು ಸದಾ ಲಭ್ಯವಿರುತ್ತಾರೆ. 16 ಮಂದಿ ಸಂದರ್ಶನ ವೈದ್ಯರು ನಿಗದಿತ ದಿನಗಳಲ್ಲಿ ಲಭ್ಯವಿರುತ್ತಾರೆ ಎಂದು ಆಸ್ಪತ್ರೆಯ ನಿರ್ದೇಶಕ ಎಂ. ಜನಾರ್ದನ್ ತಿಳಿಸಿದ್ದಾರೆ.