News and Events
ಉಜಿರೆ ಎಸ್.ಡಿ.ಎಂ ಆಸ್ಪತ್ರೆ: ಡಯಾಬೆಟ್ಸ್ ವೆಲ್‍ನೆಸ್ ಕ್ಲಿನಿಕ್ ಉದ್ಘಾಟನೆ
ರೋಗಿಗಳಿಗೆ ಚಿಕಿತ್ಸೆ ನೀಡುವುದು ಮಾತ್ರ ಆಸ್ಪತ್ರೆಗಳ ಜವಾಬ್ದಾರಿಯಲ್ಲ. ರೋಗಿಗಳಾಗದಂತೆ ನೋಡಿಕೊಳ್ಳುವುದು ಕೂಡ ಆಸ್ಪತ್ರೆಗಳ ಸಾಮಾಜಿಕ ಹೊಣೆಗಾರಿಕೆಯಾಗಿದೆ ಎಂದು ಉಜಿರೆ ಎಸ್. ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯ ನಿರ್ದೇಶಕ ಎಂ. ಜನಾರ್ದನ್ ಹೇಳಿದರು.
ಅವರು ಉಜಿರೆ ಎಸ್. ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ವಿಶ್ವ ಮಧುಮೇಹ ದಿನಾಚರಣೆ ಪ್ರಯುಕ್ತ ಡಯಾಬೆಟ್ಸ್ ವೆಲ್‍ನೆಸ್ ಕ್ಲಿನಿಕ್ ಉದ್ಘಾಟಿಸಿ ಮಾತನಾಡುತ್ತಾ, ಉಜಿರೆ ಎಸ್.ಡಿ.ಎಂ ಆಸ್ಪತ್ರೆಯು ಪೂಜ್ಯ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ನಿರ್ದೇಶನದಂತೆ ಗ್ರಾಮೀಣ ಭಾಗಗಳಲ್ಲಿ ಅನೇಕ ಉಚಿತ ಆರೋಗ್ಯ ತಪಾಸಣೆ ಶಿಬಿರಗಳ ಜೊತೆಯಲ್ಲಿ ಆರೋಗ್ಯ ಜಾಗೃತಿ ಶಿಬಿರಗಳನ್ನು ನಡೆಸುವ ಮೂಲಕ ಜನರನ್ನು ರೋಗಮುಕ್ತರನ್ನಾಗಿ ಮಾಡಲು ಶ್ರಮಿಸುತ್ತಿದೆ ಎಂದರು.
ಫಿಸಿಷಿಯನ್ ಡಾ| ಸಾತ್ವಿಕ್ ಜೈನ್ ಮಾತನಾಡಿ, ವಿಶ್ವ ಮಧುಮೇಹ ದಿನಾಚರಣೆ ಎನ್ನುವುದು ಸಂಭ್ರಮಿಸುವ ದಿನವಲ್ಲ. ವಿಶ್ವದ ಜನತೆ ಮಧುಮೇಹ ರೋಗಿಗಳಾಗದಂತೆ ಜನಜಾಗೃತಿ ಮೂಡಿಸುವುದು ಈ ದಿನದ ಉದ್ದೇಶ. ನಮ್ಮ ಆಸ್ಪತ್ರೆಯಲ್ಲಿ 3 ಮಂದಿ ಫಿಸಿಷಿಯನ್ ಹಾಗೂ ಶಸ್ತ್ರಚಿಕಿತ್ಸಾ ತಜ್ಞರು ಲಭ್ಯವಿದ್ದು, ಮಧುಮೇಹ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇದರೊಂದಿಗೆ ಹೆಚ್ಚಿನ ಅನುಕೂಲತೆಗಾಗಿ ಡಯಾಬೆಟ್ಸ್ ವೆಲ್‍ನೆಸ್ ಕ್ಲಿನಿಕ್ ತೆರೆಯಲಾಗಿದೆ. ಇಲ್ಲಿ ಮಧುಮೇಹ ಖಾಯಿಲೆಯ ಬಗ್ಗೆ ಅರಿವು ನೀಡಲಾಗುವುದು. ಪ್ರತಿ ಶುಕ್ರವಾರ ಸರ್ಜನ್ ಡಾ| ಕುಮಾರ್‍ಕೃಷ್ಣ ಮಧುಮೇಹ ಕಾಲುಗಳ ಆರೈಕೆ ಮಾಡಲಿದ್ದಾರೆ ಎಂದರು.
ವೈದ್ಯಕೀಯ ಅಧೀಕ್ಷಕ ಡಾ| ದೇವೇಂದ್ರ ಕುಮಾರ್. ಪಿ, ಫಿಸಿಷಿಯನ್‍ಗಳಾದ ಡಾ| ಯಶಸ್ವಿನಿ, ಡಾ| ಶುೃತಿ, ಶಸ್ತ್ರಚಿಕಿತ್ಸಾ ತಜ್ಞ ಡಾ| ಮಲ್ಲಿಕಾರ್ಜುನ್, ಕಣ್ಣಿನ ತಜ್ಞ ಡಾ| ಸುಭಾಶ್ಚಂದ್ರ, ಅರೆವಳಿಕೆ ತಜ್ಞ ಡಾ| ಸುಪ್ರೀತ್ ಶೆಟ್ಟಿ ಉಪಸ್ಥಿತರಿದ್ದರು. ಸೃಜನ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.







