Contact Mobile: 91 77603 97878, Land: 08256-295611/ 615/616

News and Events

ಉಜಿರೆ ಎಸ್. ಡಿ.ಎಂ ಆಸ್ಪತ್ರೆಯಲ್ಲಿ ವೈದ್ಯರ ದಿನಾಚರಣೆ

ಡಾ| ಬಿ.ಸಿ ರಾಯ್ ಅವರ ಸಮಾಜ ಸೇವೆ, ವೃತ್ತಿಯಲ್ಲಿ ಅವರಿಗಿದ್ದ ನಿಷ್ಟೆ, ಬಡವರ ಆರೋಗ್ಯದ ಬಗ್ಗೆ ಅವರಿಗಿದ್ದ ಕಾಳಜಿಯನ್ನು ಅವರ ಹುಟ್ಟು ಹಬ್ಬವಾದ ಜು. 1 ರಂದು ಭಾರತದಾದ್ಯಂತ ವೈದ್ಯರ ದಿನವನ್ನಾಗಿ ಆಚರಿಸುವ ಮೂಲಕ ಅವರನ್ನು ಸ್ಮರಿಸಿಕೊಳ್ಳುತ್ತೇವೆ ಎಂದು ಎಸ್.ಡಿಎಂ ಅಸ್ಪತ್ರೆಯ ನಿರ್ದೇಶಕರಾದ ಎಂ. ಜನಾರ್ದನ್ ಹೇಳಿದರು.
ಅವರು ಉಜಿರೆ ಎಸ್.ಡಿ.ಎಂ ಆಸ್ಪತ್ರೆಯಲ್ಲಿ ವೈದ್ಯರ ದಿನಾಚರಣೆ ವೇಳೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಆಸ್ಪತ್ರೆಯ ಎಲ್ಲಾ ವೈದ್ಯರನ್ನು ಹೂಗುಚ್ಚ ನೀಡಿ ಶುಭ ಹಾರೈಸಿ ಮಾತನಾಡುತ್ತಾ, ಪೂಜ್ಯ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಮತ್ತು ಮಾತೃಶೀ ಹೇಮಾವತಿ ಅಮ್ಮನವರ ಮಾರ್ಗದರ್ಶನದಲ್ಲಿ ನಮ್ಮ ಉಜಿರೆ ಎಸ್.ಡಿ.ಎಂ ಆಸ್ಪತ್ರೆಯಲ್ಲಿ ಅನುಭವಿ ಮತ್ತು ತಜ್ಞ ವೈದ್ಯರ ತಂಡ ಮತ್ತು ಸುಧಾರಿತ ತಂತ್ರಜ್ಞಾನ ಹೊಂದಿರುವ ಅತ್ಯಾಧುನಿಕ ವೈದ್ಯಕೀಯ ಉಪಕರಣಗಳೊಂದಿಗೆ ರೋಗಿಗಳಿಗೆ ಕೈಗೆಟುಕುವ ದರದಲ್ಲಿ ಉತ್ತಮ ವೈದ್ಯಕೀಯ ಸೇವೆ ನೀಡಲಾಗುತ್ತಿದೆ. ಆಸ್ಪತ್ರೆಯಲ್ಲಿ ಸಾಮಾನ್ಯ ಜನರಿಗೆ ಉತ್ತಮ ಗುಣಮಟ್ಟದ ವೈದ್ಯಕೀಯ ಸೇವೆ ನೀಡಲು ಹಗಲಿರುಲು ದುಡಿಯುತ್ತಿರುವ ನಮ್ಮೆಲ್ಲ ವೈದ್ಯರ ಸೇವೆ ಶ್ಲಾಘನೀಯ ಎಂದರು. ಇದೇ ಸಂದರ್ಭದಲ್ಲಿ ಪೂಜ್ಯ ಹೆಗ್ಗಡೆಯವರು ನಾಡಿನ ವೈದ್ಯರಿಗೆ ಶುಭಕೋರಿ ಮಾತನಾಡಿದ ವೀಡಿಯೋ ಪ್ರದರ್ಶಿಸಿದರು.
ವೈದ್ಯಕೀಯ ಅಧೀಕ್ಷರಾದ ಡಾ| ರಂಜನ್ ಕುಮಾರ್ ಮಾತನಾಡಿ ಕೋವಿಡ್-19 ಸಾಂಕ್ರಾಮಿಕವಾಗಿ ಹಬ್ಬುತ್ತಿರುವ ಸಂದರ್ಭದಲ್ಲಿ ಪ್ರಾಣದ ಹಂಗು ತೊರೆದು ಆರೋಗ್ಯ ಸೇವೆಯಲ್ಲಿ ತೊಡಗಿಸಿಕೊಂಡಿರುವ ವೈದ್ಯರ ಮೇಲೆಯೇ ಕಿಡಿಗೇಡಿಗಳು ಹಲ್ಲೆ ನಡೆಸುವ ಮೂಲಕ ವೈದ್ಯರಿಗೆ ಭಯದ ವಾತಾವರಣ ಸೃಷ್ಟಿಸುತ್ತಿದ್ದಾರೆ. ಆದರೂ ಧೃತಿಗೆಡದ ವೈದ್ಯರು ಜನರಿಗೆ ಆರೋಗ್ಯ ಸೇವೆಯನ್ನು ನೀಡುತ್ತಿರುವುದು ಶ್ಲಾಘನೀಯ, ವೈದ್ಯ ವೃತ್ತಿಯಲ್ಲಿ ಭಯದ ವಾತಾವರಣ ಹೋಗಿ, ವೈದ್ಯರಿಗೆ ಹಿಂದಿನ ಕಾಲದಲ್ಲಿ ಸಿಗುತ್ತಿರುವ ಮರ್ಯಾದೆ ಮತ್ತೆ ಸಿಗುವಂತಾಗಲಿ ಎಂದು ಶುಭ ಹಾರೈಸಿದರು.
ವೈದ್ಯಕೀಯ ಸೇವೆಯಲ್ಲಿ ನಿತ್ಯ ಒಂದೇ ರೀತಿಯ ಕೆಲಸಗಳಿಂದ ಬೇಸತ್ತ ಮನಸ್ಸುಗಳಿಗೆ ಮನರಂಜನೆ ನೀಡಲು ಹಮ್ಮಿಕೊಳ್ಳಲಾದ ವಿವಿಧ ಮನರಂಜನಾ ಕಾರ್ಯಕ್ರಮದಲ್ಲಿ ವೈದ್ಯರು ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿ ಭಾಗವಹಿಸಿದರು.
ಡಾ| ಸಾತ್ವಿಕ್ ಜೈನ್, ಹಿರಿಯ ವೈದ್ಯರಾದ ಡಾ| ಬಾಲಕೃಷ್ಣ ಭಟ್ ಎಸ್.ಡಿ.ಎಂ ಮೆಡಿಕಲ್ ಟ್ರಸ್ಟ್ ಕಾರ್ಯದರ್ಶಿ ಶಿಶುಪಾಲ್ ಪೂವಣಿ ಮಾತನಾಡಿ, ವೈದ್ಯ ವೃತ್ತಿಯ ಪ್ರಾಮುಖ್ಯತೆಯನ್ನು ಸಭೆಯ ಮುಂದಿಟ್ಟು, ಶುಭಹಾರೈಸಿದರು. ಆಸ್ಪತ್ರೆಯ ವೈದ್ಯವೃಂದದವರು, ದಾದಿಯರು ಹಾಗೂ ಆಸ್ಪತ್ರೆಯ ಸಿಬ್ಬಂದಿ ಉಪಸ್ಥಿತರಿದ್ದರು. ಸಚಿನ್ ಇವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಆಸ್ಪತ್ರೆಯ ಮಾರ್ಕೆಟಿಂಗ್ ಕನ್ಸಲ್‍ಟೆಂಟ್ ಉಮೇಶ್ ಸ್ವಾಗತಿಸಿ, ಪ್ರಭಾರ ಮಾನವ ಸಂಪನ್ಮೂಲ ಅಧಿಕಾರಿ ಚಿತ್ರಾ ಕೆ.ಎಸ್ ಧನ್ಯವಾದ ಅರ್ಪಿಸಿದರು. ನರ್ಸಿಂಗ್ ಅಧೀಕ್ಷಕಿ ಶೆರ್ಲಿ ಕಾರ್ಯಕ್ರಮ ನಿರೂಪಿಸಿದರು.
ವರದಿ: ನಾರಾಯಣ. ಬಿ

News and Events

Related News