News and Events
“ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮಕ್ಕಳ ಆರೋಗ್ಯ ತಪಾಸಣೆ ಶಿಬಿರ – ಮನರಂಜನೆ ಮೂಲಕ ಮಕ್ಕಳ ಆರೋಗ್ಯ ತಪಾಸಣೆ ನಡೆಸಿದ ವೈದ್ಯರು..!”
ಉಜಿರೆ :(ನ.17) ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮಕ್ಕಳ ಆರೋಗ್ಯ ತಪಾಸಣೆ ಶಿಬಿರ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮವನ್ನು ಬೆಳ್ತಂಗಡಿ ತಾಲೂಕಿನ ಸಂಚಾರ ವಿಭಾಗದ ಎಸ್.ಐ ಅರ್ಜುನ್ ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಇಂದಿನ ಕಾಲದಲ್ಲಿ ಮಕ್ಕಳಲ್ಲೂ ಬಿಪಿ, ಶುಗರ್ ಹೆಚ್ಚುತ್ತಿದೆ. ದೊಡ್ಡವರಿಗೆ ಸಮಸ್ಯೆಗಳಾದರೆ ಗೊತ್ತಾಗುತ್ತೆ.ಆದರೆ ಸಣ್ಣ ಮಕ್ಕಳಿಗೆ ಗೊತ್ತಾಗಲ್ಲ. ಹೀಗಾಗಿ ಇಂತಹ ಆರೋಗ್ಯ ತಪಾಸಣೆ ಶಿಬಿರ ಉಪಯೋಗವಾಗುತ್ತದೆ. ಈ ಮೂಲಕ ಮಕ್ಕಳಲ್ಲಿರುವ ಸಮಸ್ಯೆಗಳು ಗೊತ್ತಾಗುತ್ತೆ ಎಂದರು.ಮಕ್ಕಳೆಂದರೆ ಪೋಷಕರಿಗೆ ಕನಸು, ಆ ಕನಸಿಗೆ ಯಾವುದೇ ತೊಂದರೆಗಳಾಗಬಾರದು, ಹೀಗಾಗಿ ಮಕ್ಕಳನ್ನು ಕರೆ ತಂದು ತಪಾಸಣೆ ನಡೆಸಿ ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಸಿರಿ ಸಂಸ್ಥೆಯ ಎಂ.ಡಿ, ಕೆ. ಎನ್ ಜನಾರ್ದನ, ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ ಕೆ. ಮೋಹನ್ ಕುಮಾರ್, ರಾಜೇಶ್ ಪೈ, ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಚೈತೇಶ್, ಎಸ್ ಡಿ ಎಮ್ ಆಸ್ಪತ್ರೆಯ ಮುಖ್ಯಸ್ಥರಾದ ಎಂ. ಜನಾರ್ದನ್, ಮಕ್ಕಳ ವೈದ್ಯರುಗಳಾದ ಡಾ. ಅರ್ಚನಾ ಕೆ.ಎಂ, ಡಾ.ಪ್ರಥಿತ್, ಡಾ.ನಿಖಿತಾ ಮಿರ್ಲೆ, ಆಸ್ಪತ್ರೆ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಆಸ್ಪತ್ರೆಯಲ್ಲಿ ಮಕ್ಕಳಿಗೆ ಮನರಂಜನೆ..!:
ಆಸ್ಪತ್ರೆ ಅಂದಾಗ ಮಕ್ಕಳು ಹಿಂದೇಟು ಹಾಕೋದು ಸಾಮಾನ್ಯ. ಆದರೆ ಇಲ್ಲಿ ಮಕ್ಕಳು ಮುಂದಿನ ಆರೋಗ್ಯ ತಪಾಸಣೆ ಶಿಬಿರಕ್ಕೆ ಬರುತ್ತೇವೆ ಎಂದಿದ್ದಾರೆ. ಅದಕ್ಕೆ ಕಾರಣ ಆಸ್ಪತ್ರೆಯಿಂದ ಆಯೋಜನೆಗೊಂಡ ಮನರಂಜನಾ ಕಾರ್ಯಕ್ರಮ, ಹೌದು, ಮಕ್ಕಳಿಗಾಗಿ ಬೊಂಬೆಗಳನ್ನು ಕರೆತರಲಾಗಿತ್ತು.ಬೊಂಬೆಗಳು ಮಕ್ಕಳನ್ನು ಮನರಂಜನೆ ಮಾಡಿದವು. ಅಲ್ಲದೇ ಮಕ್ಕಳಿಗೆ ಆಟದ ಪರಿಕರಗಳು, ಚಾಕಲೇಟ್ ನೀಡಲಾಗಿತ್ತು.
ಅಲ್ಲದೇ ಹಾಡಿನ ಮೂಲಕ ಮಕ್ಕಳು ನೃತ್ಯ ಕೂಡ ಮಾಡಿದ್ದರು. ಆರೋಗ್ಯ ತಪಾಸಣೆ ಶಿಬಿರದ ಜೊತೆಗೆ ಮನರಂಜನೆ ಕೂಡ ಇತ್ತು.