News and Events
ಶ್ರೀ ಕ್ಷೇತ್ರ ಧರ್ಮಸ್ಥಳದತ್ತ ಪಾದಯಾತ್ರೆಯಲ್ಲಿ ಸಹಸ್ರಾರು ಶಿವಭಕ್ತರು: ವೈದ್ಯಕೀಯ ಸೇವೆಯಲ್ಲಿ ನಿರತರಾದ ಆರೋಗ್ಯ ಕಾರ್ಯಕರ್ತರು
ಶಿವರಾತ್ರಿ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸುವ ಪಾದಯಾತ್ರಿಗಳಿಗೆ ಪೂಜ್ಯ ಹೆಗ್ಗಡೆಯವರ ಆದೇಶದಂತೆ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆಯ ವತಿಯಿಂದ ಪ್ರತಿ ವರ್ಷದಂತೆ ಈ ಬಾರಿಯೂ ಮಾರ್ಚ್ 7 ರಿಂದ ವೈದ್ಯಕೀಯ ಸೇವೆಯನ್ನು ಪ್ರಾರಂಭಿಸಲಾಗಿದೆ.
ಚಾರ್ಮಾಡಿ ಪಂಚಾಯತ್ ಅಧ್ಯಕ್ಷರಾದ ಪ್ರಸಾದ್ ಕಟ್ಟೆಮಜಲು, ದೇವಸ್ಥಾನದ ಆಡಳಿತ ಮೊಕ್ತೇಸರರಾದ ಪ್ರಕಾಶ್ ಹೊಸಮಠ, ಅನಂತರಾವ್ ಭಟ್, ಕೃಷ್ಣ ಭಟ್, ಆಸ್ಪತ್ರೆಯ ಶಿಶುಪಾಲ ಪೂವಣಿ, ವೈದ್ಯರಾದ ಡಾ| ಚಿನ್ಮಯ್, ಅಣ್ಣಿ ಪೂಜಾರಿ ಇವರ ಉಪಸ್ಥಿತಿಯಲ್ಲಿ ಚಾರ್ಮಾಡಿಯ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಬಳಿ ವೈದ್ಯಕೀಯ ಶಿಬಿರವನ್ನು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಲಾಯಿತು.
ಚಾರ್ಮಾಡಿ ಸತ್ಯನಪಲ್ಕೆ, ಧರ್ಮಸ್ಥಳ, ಬೂಡುಜಾಲು, ಉಜಿರೆ ಧರ್ಮಸ್ಥಳ ಕಾಲೇಜು ಇಲ್ಲಿ ಪಾದಯಾತ್ರಿಗಳಿಗೆ ಆರೋಗ್ಯ ಶಿಬಿರ ನಡೆಸಲು ವ್ಯವಸ್ಥೆ ಮಾಡಲಾಗಿದೆ. ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆಯಲ್ಲಿ ಪಾದಯಾತ್ರಿಗಳಿಗೆ ಆರೋಗ್ಯ ಸೇವೆ ನೀಡಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ ಹಾಗೂ ಪಾದಯಾತ್ರಿಗಳಿಗೆ ಬೆಲ್ಲನೀರಿನ ವ್ಯವಸ್ಥೆ ಕೂಡ ಮಾಡಲಾಗಿದೆ. ಎಲ್ಲಾ ಶಿಬಿರಗಳಲ್ಲಿ ಅಗತ್ಯವಿರುವ ಔಷಧಿ, ಮುಲಾಮು, ಸ್ಪ್ರೇ ಬ್ಯಾಂಡೇಜ್ ಇತ್ಯಾದಿಗಳನ್ನು ಒದಗಿಸಲಾಗುತ್ತಿದೆ.
ಪಾದಯಾತ್ರಿಗಳ ಸೇವೆ ಮಾಡುವ ಉದ್ದೇಶದಿಂದ ಬೆಂಗಳೂರಿನಿಂದ ಬಂದ ಡಾ| ಕೆ.ಎಲ್. ಪಂಚಾಕ್ಷಾರಿ, ಡಾ| ನಾಗರಾಜ್, ಡಾ| ರೇಣುಕಾ, ಡಾ| ಶೀತಲ್ ಶರ್ಮಾ, ಡಾ| ಮಂಜುನಾಥ, ಡಾ| ನಾಗಲಕ್ಷ್ಮೀ ಹಾಗೂ ಸಮಾಜ ಸೇವಕರಾದ ಕೆ.ಪಿ. ಸಿದ್ಧರಾಮೇಗೌಡ, ಇವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆಯ ವೈದ್ಯರೊಂದಿಗೆ ಸೇರಿ ಪಾದಯಾತ್ರಿಗಳಿಗೆ ವೈದ್ಯಕೀಯ ಸೇವೆ ನೀಡುತ್ತಿದ್ದಾರೆ.
ವರದಿ: ನಾರಾಯಣ. ಬಿ
