Contact Mobile: 91 77603 97878, Land: 08256-295611/ 615/616

News and Events

ಉಜಿರೆ ಎಸ್.ಡಿ.ಎಂ. ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಐಸಿಯು ವೆಂಟಿಲೇಟರ್ ಉದ್ಘಾಟನೆ

ಉಜಿರೆ, ಸೆ. 17: ಇಲ್ಲಿನ ಎಸ್.ಡಿ.ಎಂ. ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ 30 ಲಕ್ಷ ರೂ. ಮೌಲ್ಯದ ಎರಡು ಬಿಪಿಎಲ್ ಲೋವೆನ್‍ಸ್ಪೈನ್ ಎಲಿಸಾ-600 ಐಸಿಯು ವೆಂಟಿಲೇಟರ್’ಗಳನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ ಇತ್ತೀಚೆಗೆ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಶ್ರೀ ಕ್ಷೇತ್ರ ಧರ್ಮಸ್ಥಳದ ಪ್ರತಿಯೊಂದು ಸಂಸ್ಥೆಗಳು ಕೂಡ ಸೇವೆಯ ಉದ್ದೇಶದಿಂದ ನಡೆಸಲ್ಪಡುತ್ತವೆ. ಖರ್ಚಿನ ಬಗ್ಗೆ ಚಿಂತಿಸದೆ ಜನತೆಗೆ ಉತ್ತಮ ಸೇವೆ ನೀಡುವ ಗುರಿಯೊಂದಿಗೆ ಕೆಲಸ ನಿರ್ವಹಿಸುತ್ತವೆ. ಇದೇ ರೀತಿ ಉಜಿರೆ ಎಸ್.ಡಿ.ಎಂ. ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕೋಟ್ಯಂತರ ರೂ. ಖರ್ಚು ಮಾಡಿ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ವೈದ್ಯಕೀಯ ಸಲಕರಣೆಗಳನ್ನು ಒದಗಿಸಲಾಗಿದೆ. ಇದರಿಂದಾಗಿ ಸುಧಾರಿತ ವೈದ್ಯಕೀಯ ಸೇವೆ ನೀಡಲು ಸಹಕಾರಿಯಾಗಿದೆ ಎಂದು ಹೇಳಿದರು. 

ಇತ್ತೀಚೆಗೆ ಈ ಆಸ್ಪತ್ರೆಯಲ್ಲಿ ನಡೆಯುತ್ತಿರುವ ಯಶಸ್ವಿ ಶಸ್ತ್ರಚಿಕಿತ್ಸೆಗಳು ಕೂಡ ಈ ಆಸ್ಪತ್ರೆಯ ಮೇಲೆ ಗ್ರಾಮೀಣ ಜನತೆಯಲ್ಲಿ ಭರವಸೆ ಹೆಚ್ಚಿಸಿದೆ. ಈ ಆಸ್ಪತ್ರೆ ಅನೇಕ ಮಂದಿಗೆ ಉದ್ಯೋಗದ ಅವಕಾಶ ನೀಡಿ ಅನೇಕ ಕುಟುಂಬಗಳ ನೆಮ್ಮದಿಗೆ ಕಾರಣವಾಗಿದೆ. ಇತರ ಅನೇಕರಿಗೆ ಪರೋಕ್ಷ ರೀತಿಯಲ್ಲಿ ವಿವಿಧ ಅವಕಾಶ ಒದಗಿಸುವ ಮೂಲಕ ಪ್ರಯೋಜನಕಾರಿಯಾಗಿದೆ.:  ಡಿ. ಹರ್ಷೇಂದ್ರ ಕುಮಾರ್

ಈ ಸಂದರ್ಭದಲ್ಲಿ ಶಾಂತಿವನ ಟ್ರಸ್ಟ್ ಕಾರ್ಯದರ್ಶಿ ಸೀತಾರಾಮ ತೋಳ್ಪಡಿತ್ತಾಯ, ಎಸ್.ಡಿ.ಎಂ. ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್, ವೈದ್ಯಕೀಯ ಅಧೀಕ್ಷಕ ಡಾ| ದೇವೇಂದ್ರ ಕುಮಾರ್ ಪಿ., ಮುಖ್ಯ ವೈದ್ಯಾಧಿಕಾರಿ ಡಾ| ಸಾತ್ವಿಕ್ ಜೈನ್, ವೈದ್ಯರು, ದಾದಿಯರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

9 ಹಾಸಿಗೆಗಳ ಸುಸಜ್ಜಿತ ಐಸಿಯು ಹೊಂದಿರುವ ಈ ಆಸ್ಪತ್ರೆಯು ಈಗಾಗಲೇ 6 ವೆಂಟಿಲೇಟರ್’ಗಳನ್ನು ಹೊಂದಿದ್ದು, ಪ್ರಸ್ತುತ ವೆಂಟಿಲೇಟರ್’ಗಳ ಸಂಖ್ಯೆ 8ಕ್ಕೆ ಏರಿದೆ. ಹೃದಯಾಘಾತ, ಸ್ಟ್ರೋಕ್, ಉಸಿರಾಟದ ಸಮಸ್ಯೆ ಮುಂತಾದ ತುರ್ತು ಸಂದರ್ಭದಲ್ಲಿ ಈ ಅತ್ಯಾಧುನಿಕ ವೆಂಟಿಲೇಟರ್’ಗಳು ಬಹಳ ಉಪಯುಕ್ತವಾಗಲಿವೆ. ಇದು ಉತ್ತಮ ಗುಣಮಟ್ಟದ ಉಸಿರಾಟವನ್ನು ಒದಗಿಸುತ್ತದೆ. ಇದರಲ್ಲಿ ಅಳವಡಿಸಿರುವ ಪ್ಯಾರಾಮೀಟರ್ ಹಾಗೂ ರೋಗಿಯಿಂದ ಸಂಪರ್ಕ ಕಳೆದುಕೊಂಡಾಗ ಎಚ್ಚರಿಸುವ ಸೈರನ್ ಹೊಂದಿದ್ದು, ರೋಗಿಗೆ ಉಸಿರಾಟದಲ್ಲಿ ವ್ಯತ್ಯಯವಾಗದಂತೆ ನಿಗಾ ವಹಿಸುತ್ತದೆ. ಹೊಸ ತಂತ್ರಜ್ಞಾನ ಹೊಂದಿರುವ ಈ ವೆಂಟಿಲೇಟರ್ ವಯಸ್ಕರು, ಮಕ್ಕಳು ಮತ್ತು ನವಜಾತ ಶಿಶುಗಳಿಗೆ ಹೊಂದಾಣಿಕೆಯಾಗಬಲ್ಲದು. ಈ ವೆಂಟಿಲೇಟರ್ ಪೋರ್ಟೇಬಲ್ ಆಗಿದ್ದು, ಅಗತ್ಯ ಬಿದ್ದಾಗ ಆಂಬ್ಯುಲೆನ್ಸ್’ಗಳಲ್ಲಿಯೂ ಅಳವಡಿಸಲು ಸಾಧ್ಯವಿದೆ. ಮಂಗಳೂರು ಬಳಿಕ ಈ ಅತ್ಯಾಧುನಿಕ ವೆಂಟಿಲೇಟರ್ ಹೊಂದಿರುವ ಏಕೈಕ ಆಸ್ಪತ್ರೆ ಇದಾಗಿದೆ ಎಂದು ಎಸ್.ಡಿ.ಎಂ. ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆ ತಿಳಿಸಿದೆ.

News and Events

Related News