News and Events
ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಧನ್ವಂತರಿ ಪೂಜೆ ಹಾಗೂ ದುರ್ಗಾಪೂಜೆ
ವೈದ್ಯಕೀಯ ಸೇವೆಯಲ್ಲಿ ಜನಮೆಚ್ಚುಗೆ ಪಡೆದ ಉಜಿರೆಯ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯು ಬಡ, ಮಧ್ಯಮ ಹಾಗೂ ಎಲ್ಲಾ ವರ್ಗ ಜನರ ವಿಶ್ವಾಸಕ್ಕೆ ಪಾತ್ರವಾಗಿದೆ. ಪೂಜ್ಯ ಡಾ. ಡಿ ವೀರೇಂದ್ರ ಹೆಗ್ಗಡೆಯವರ ಹಾಗೂ ಹೇಮಾವತಿ ವಿ. ಹೆಗ್ಗಡೆಯವರ ಮಾರ್ಗದರ್ಶನ ಹಾಗೂ ಹರ್ಷೆಂದ್ರ ಕುಮಾರ್ ಅವರ ಸಹಕಾರದಲ್ಲಿ ಲಕ್ಷಾಂತರ ಮಂದಿಗೆ ಅತೀ ಕಡಿಮೆ ದರದಲ್ಲಿ ಚಿಕಿತ್ಸೆ ಹಾಗೂ ಸಾವಿರಾರು ಮಂದಿಗೆ ಯಶಸ್ವಿ ಶಸ್ತ್ರಚಿಕಿತ್ಸೆಗಳನ್ನು ರಿಯಾಯತಿ ದರದಲ್ಲಿ ಮಾಡುವ ಮೂಲಕ ಗ್ರಾಮೀಣ ಜನತೆಯ ಆರೋಗ್ಯ ಕಾಪಾಡುವಲ್ಲಿ ಸದಾ ಶ್ರಮಿಸುತ್ತಿದೆ ಎಂದು ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್ ತಿಳಿಸಿದರು.
ಉಜಿರೆಯ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಫೆ. 11ರಂದು ದುರ್ಗಾ ಪೂಜೆ ಹಾಗೂ ಧನ್ವಂತರಿ ಪೂಜೆಯ ಬಳಿಕ ಮಾತನಾಡುತ್ತಾ, ಧನ್ವಂತರಿ ಆರಾಧನೆಯಿಂದ ಆರೋಗ್ಯ ವೃದ್ಧಿಸುತ್ತದೆ. ಊರಿನ ಜನತೆ ಆರೋಗ್ಯವಂತರಾಗಿ ಸುಖ ಶಾಂತಿ ನೆಮ್ಮದಿಯೊಂದಿಗೆ ಜೀವನ ನಡೆಸುವಂತಾಗಲಿ. ನಮ್ಮ ವೈದ್ಯಕೀಯ ಸೇವೆಯಿಂದ ಜನ ತೃಪ್ತರಾಗಿರುವುದು ನಮಗೆ ಖುಷಿ ಕೊಟ್ಟಿದೆ. ಇದೇ ರೀತಿಯ ಉತ್ತಮ ಸೇವೆ ನೀಡಲು ಭಗವಂತನ ಅನುಗ್ರಹ ಸದಾ ಇರಲಿ ಎಂಬ ಸದಾಶಯದೊಂದಿಗೆ ರೋಗಿಗಳ ಹಿತದೃಷ್ಟಿಯಿಂದ ಈ ಪೂಜೆಯನ್ನು ನಡೆಸಲಾಗಿದೆ ಎಂದರು.
ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಪೂಜಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ದೇವೇಂದ್ರ ಕುಮಾರ್, ವೈದ್ಯಾಧಿಕಾರಿ ಡಾ. ಸಾತ್ವಿಕ್ ಜೈನ್, ಆಸ್ಪತ್ರೆಯ ವೈದ್ಯರು, ಹಾಗೂ ಸಿಬ್ಬಂದಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.