News and Events
ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಗೆ ಸುರಕ್ಷಿತ ಹೆರಿಗೆಯನ್ನು ಖಾತ್ರಿಪಡಿಸುವ ಗುಣಮಟ್ಟದ ಮಾನದಂಡ ಮಾನ್ಯತಾ ಪ್ರಮಾಣಪತ್ರ
ಭಾರತದ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರದ ವೈದ್ಯರನ್ನು ಪ್ರತಿನಿಧಿಸುವ ವೃತ್ತಿಪರ ಸಂಸ್ಥೆಯಾದ ಭಾರತದ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರದ ಸೊಸೈಟಿಗಳ ಒಕ್ಕೂಟ (FOGSI) ಸಂಸ್ಥೆಯಿಂದ ಸುರಕ್ಷಿತ ಹೆರಿಗೆಯನ್ನು ಖಾತ್ರಿಪಡಿಸುವ ಗುಣಮಟ್ಟದ ಮಾನದಂಡ ಅನುಸರಿಸುತ್ತಿರುವ ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಗೆ ಮಾನ್ಯತಾ ಪ್ರಮಾಣಪತ್ರ ದೊರೆತಿದೆ.
ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯ ಪ್ರಸೂತಿ ವಿಭಾಗದ ನರ್ಸಿಂಗ್ ಸಿಬ್ಬಂದಿ ವೈದ್ಯರ ಅನುಪಸ್ಥಿಯಲ್ಲಿ ತುರ್ತು ಸಂದರ್ಭದಲ್ಲಿ ಗರ್ಭಿಣಿಯ ಸುರಕ್ಷಿತ ಆರೈಕೆ ಮಾಡಲು ತಜ್ಞರಿಂದ ವಿಶೇಷ ತರಬೇತಿ ಪಡೆದುಕೊಂಡಿದ್ದು, ಭಾರತದ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರದ ಸೊಸೈಟಿಗಳ ಒಕ್ಕೂಟ ನಡೆಸುವ ಪರೀಕ್ಷೆಯಲ್ಲಿ ನೂರು ಶೇಕಡಾ ಅಂಕ ಪಡೆಯುವ ಮೂಲಕ ಮಾನ್ಯತಾ ಪ್ರಮಾಣಪತ್ರ ಪಡೆದುಕೊಂಡಿದೆ.
ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಪ್ರಮಾಣಪತ್ರವನ್ನು ಆಸ್ಪತ್ರೆಯ ನಿರ್ದೇಶಕ ಎಂ. ಜನಾರ್ದನ್ ಮತ್ತು ನರ್ಸಿಂಗ್ ಅಧೀಕ್ಷಕಿ ಶಿರ್ಲಿ ಇವರಿಗೆ ಹಸ್ತಾಂತರಿಸಿ ಮಾತನಾಡುತ್ತಾ, ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದಲ್ಲಿ ವಿಶೇಷ ತರಬೇತಿ ಪಡೆದಿರುವ ನರ್ಸಿಂಗ್ ಸಿಬ್ಬಂದಿ, ಸುರಕ್ಷಿತ ಹೆರಿಗೆಗೆ ಬೇಕಾಗಿರುವ ಗುಣಮಟ್ಟದ ಸೇವೆ ನೀಡುತ್ತಿದ್ದು, ಇಲ್ಲಿ ಹೆರಿಗೆಗೆ ಬರುವ ಗರ್ಭಿಣಿಯರು ನಿರ್ಭೀತಿಯಿಂದ ಸುರಕ್ಷಿತವಾಗಿ ಪ್ರಸವ ಮಾಡಿಸಿಕೊಳ್ಳುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯಕೀಯ ಸೇವೆಯ ಬಗ್ಗೆ ಜನರ ಅಭಿಪ್ರಾಯ ಉತ್ತಮವಾಗಿದೆ. ರೋಗಿಗಳಿಗೆ ನಗುಮೊಗದ ಅತ್ಯುತ್ತಮ ಸೇವೆ ನೀಡುತ್ತಿರುವ ಎಲ್ಲಾ ಸಿಬ್ಬಂದಿಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ರೋಗಿಗಳಿಗೆ ತೊಂದರೆಯಾಗದಂತೆ ಅವರ ಅನುಕೂಲಕ್ಕೆ ಬೇಕಾಗುವ ಎಲ್ಲಾ ಸೌಲಭ್ಯಗಳನ್ನು ಕ್ಷೇತ್ರದಿಂದ ನೀಡಲಾಗುವುದು ಎಂದರು.
ಪ್ರಸೂತಿ ವಿಭಾಗದ ಗುಣಮಟ್ಟ, ಗರ್ಭಿಣಿಯರ ಆರೋಗ್ಯದ ಪೂರ್ವಭಾವಿ ಮೌಲ್ಯಮಾಪನೆ, ಪ್ರಸವಕ್ಕೆ ಬೇಕಾಗುವ ಸಿದ್ಧತೆ, ಜನನ ಪರಿಚಾರಕರಿಗೆ ಸುರಕ್ಷಿತವಾದ ಪ್ರಸವ ಮಾಡಿಸಲು ಬೇಕಾಗುವ ಕೌಶಲ್ಯ ಮತ್ತು ವಿಶೇಷ ಜ್ಞಾನ, ಪ್ರಸವ ನಂತರದ ರಕ್ತಸ್ರಾವ ಗುರುತಿಸುವುದು ಮತ್ತು ನಿರ್ವಹಿಸುವುದು. ನವಜಾತ ಶಿಶುಗಳ ಆರೈಕೆ, ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಿರ್ವಹಿಸುವ ವಿಧಾನಗಳ ಜ್ಞಾನ, ಕ್ಲಿಷ್ಟಕರವಾದ ಮತ್ತು ತುರ್ತು ಸಂದರ್ಭದ ನಿರ್ವಹಣೆ, ಹೆರಿಗೆಯ ಸಂದರ್ಭದಲ್ಲಿ ಉಂಟಾಗುವ ತೊಡಕುಗಳು ಮತ್ತು ಅದನ್ನು ಯಶಸ್ವಿಯಾಗಿ ನಿರ್ವಹಿಸುವ ವಿಧಾನಗಳ ಬಗ್ಗೆ ವಿಶೇಷವಾದ ತರಬೇತಿಯನ್ನು ಈ ಆಸ್ಪತ್ರೆಯ ಪ್ರಸೂತಿ ವಿಭಾಗದ ನರ್ಸಿಂಗ್ ಸಿಬ್ಬಂದಿ ಪಡೆದಿದ್ದು, ಭಾರತದ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರದ ಸೊಸೈಟಿಗಳ ಒಕ್ಕೂಟ ಸಂಸ್ಥೆಯು ನಡೆಸುವ ಪರೀಕ್ಷೆಯಲ್ಲಿ 16 ರಲ್ಲಿ 16 ಅಂಕ ಪಡೆದುಕೊಂಡಿತ್ತು.
ಗರ್ಭಿಣಿ, ಬಾಣಂತಿ ಹಾಗೂ ಮಗುವಿನ ಸುರಕ್ಷತೆಗೆ ಹೆಚ್ಚಿನ ಆಧ್ಯತೆ ನೀಡುತ್ತಿರುವ ಆಸ್ಪತ್ರೆಗಳಿಗೆ ಈ ಪ್ರಮಾಣಪತ್ರ ನೀಡಲಾಗುತ್ತಿದೆ. ಮಾನ್ಯತಾ ಪ್ರಮಾಣಪತ್ರ ದೊರೆತ ಕರ್ನಾಟಕದ ಕೆಲವೇ ಕೆಲವು ಆಸ್ಪತ್ರೆಗಳಲ್ಲಿ ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯು ಒಂದಾಗಿದೆ ಎಂದು ನಿರ್ದೇಶಕ ಎಂ. ಜನಾರ್ದನ್ ತಿಳಿಸಿದರು.
ನರ್ಸಿಂಗ್ ಸಿಬ್ಬಂದಿಗಳಿಗೆ ವಿಶೇಷ ತರಬೇತಿ ವ್ಯವಸ್ಥೆ ಮತ್ತು ಮಾನ್ಯತಾ ಪ್ರಮಾಣಪತ್ರ ಪಡೆಯುವಲ್ಲಿ ಶ್ರಮ ವಹಿಸಿದ ನರ್ಸಿಂಗ್ ಅಧೀಕ್ಷಕಿ ಶೆರ್ಲಿ ಇವರನ್ನು ಪೂಜ್ಯ ಹೆಗ್ಗಡೆಯವರು ಅಭಿನಂದಿಸಿದರು.
ಆಸ್ಪತ್ರೆಯ ನಿರ್ದೇಶಕ ಎಂ. ನರ್ಸಿಂಗ್ ಅಧೀಕ್ಷಕಿ ಶೆರ್ಲಿ, ಮಾನವ ಸಂಪನ್ಮೂಲ ಅಧಿಕಾರಿ ಸೌಮ್ಯ, ಐಟಿ ವಿಭಾಗದ ಅನಿಲ್ ಕುಮಾರ್ ಜೈನ್, ಚಂದ್ರಶೇಖರ್ ಎಂ, ಅನೂಷ ಹಾಗೂ ಪ್ರಸೂತಿ ವಿಭಾಗದ ಸೆಲಿಸ್ಟಿನ್ ಜ್ಯೋತಿ ಉಪಸ್ಥಿತರಿದ್ದರು.