Contact Mobile: 91 77603 97878, Land: 08256-295611/ 615/616

News and Events

ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆ: ವೃತ್ತಿ ಕೌಶಲ್ಯತಾ ತರಬೇತಿ

ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಜು.13, 2023 ರಂದು ಅಂತರಾಷ್ಟ್ರೀಯ ಮಟ್ಟದಲ್ಲಿ ವಿವಿಧ ಕಾರ್ಯಾಗಾರಗಳನ್ನು ನಿರ್ವಹಿಸಿದ ಇನ್‍ಸ್ಟಿಟ್ಯೂಟ್ ಆಫ್ ಹೆಲ್ತ್ ಮ್ಯಾನೇಜ್‍ಮೆಂಟ್ ರಿಸರ್ಚ್ (ಐ.ಐ.ಹೆಚ್.ಎಂ.ಆರ್) ಬೆಂಗಳೂರು ಇಲ್ಲಿನ ಖ್ಯಾತ ವೈದ್ಯರು ಪರಿಣಾಮಕಾರಿ ಸಂವಹಣ ಮತ್ತು ಒತ್ತಡ ನಿರ್ವಹಣೆ ಎಂಬ ವಿಷಯದಲ್ಲಿ ತರಬೇತಿ ಕಾರ್ಯಾಗಾರ ನಡೆಸಿದರು.
ರೋಗಿಗಳಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಆರೋಗ್ಯ ಕ್ಷೇತ್ರದ ವೃತ್ತಿಪರರಿಗೆ ಇರಬೇಕಾದ ಕೌಶಲ್ಯತೆ, ಉತ್ತಮ ಸಂವಹನ ಕಲೆ, ಸಮಯ ಮತ್ತು ಒತ್ತಡಗಳ ನಿರ್ವಹಣೆ ಕುರಿತು ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರು, ದಾದಿಯರು ಮತ್ತು ಎಲ್ಲಾ ವಿಭಾಗದ ಮುಖ್ಯಸ್ಥರಿಗೆ ಆಯೋಜಿಸಿದ್ದ 4 ದಿನಗಳ ಕಾರ್ಯಾಗಾರವನ್ನು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೇಸರ ಶರತ್‍ಕೃಷ್ಣ ಪಡ್ವೆಟ್ನಾಯ ಜು. 13ರಂದು ಉದ್ಘಾಟಿಸಿದರು.
ಭಾರತ ಸರಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯ ಮತ್ತು ಭಾರತದ ವಾಣಿಜ್ಯೋದ್ಯಮ ಅಭಿವೃದ್ಧಿ ಸಂಸ್ಥೆಯಿಂದ ಪ್ರಮಾಣಿಕೃತ ತರಬೇತುದಾರರಾಗಿರುವ, ಪ್ರಸ್ತುತ ಉಜಿರೆ ಎಸ್.ಡಿ.ಎಂ ಆಸ್ಪತ್ರೆಯ ನಿರ್ದೇಶಕರಾಗಿರುವ ಎಂ. ಜನಾರ್ದನ್ ತರಬೇತಿ ಕಾರ್ಯಾಗಾರ ಆಯೋಜಿಸಿ ಮಾತನಾಡುತ್ತಾ, ಉತ್ತಮ ತರಬೇತಿಯಿಂದ ತನ್ನ ವೃತ್ತಿಯಲ್ಲಿ ಉತ್ತಮ ಕಾರ್ಯದಕ್ಷತೆಯನ್ನು ಸಾಧಿಸಬಹುದು. ಡಾ| ಡಿ. ವೀರೇಂದ್ರ ಹೆಗ್ಗಡೆಯವರು ತರಬೇತಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ ಎಂದರು.
ಇನ್‍ಸ್ಟಿಟ್ಯೂಟ್ ಆಫ್ ಹೆಲ್ತ್ ಮ್ಯಾನೇಜ್‍ಮೆಂಟ್ ರಿಸರ್ಚ್ ಬೆಂಗಳೂರು ಇಲ್ಲಿನ ಪ್ರೊಫೆಸರ್ & ಡೈರೆಕ್ಟರ್ ಆಗಿರುವ ಡಾ| ಉಷಾ ಮಂಜುನಾಥ್ ಇವರು ಮಾತನಾಡಿ ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ದೊರೆಯುವ ಉಚಿತ ಮತ್ತು ಮಿತದರದ ವೈದ್ಯಕೀಯ ಸೇವೆ, ಇಲ್ಲಿನ ಶುಚಿತ್ವ ಹಾಗೂ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಔಷಧದಾನಕ್ಕೆ ನೀಡುತ್ತಿರುವ ಮಹತ್ವಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಮನೆ ಮತ್ತು ವೃತ್ತಿ ಕ್ಷೇತ್ರದಲ್ಲಿ ಇರುವ ಒತ್ತಡಗಳನ್ನು ನಿಭಾಯಿಸುವುದರೊಂದಿಗೆ ರೋಗಿಗಳಿಗೆ ಇನ್ನೂ ಹೆಚ್ಚಿನ ಸೇವೆ ನೀಡಲು ಈ ತರಬೇತಿ ತುಂಬಾ ಸಹಕಾರಿಯಾಗಿದೆ ಎಂದು ತರಬೇತಿ ಪಡೆದ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದರು.
ಡಾ| ದೀಪಶ್ರೀ ಎಂ. ಆರ್, ಡಾ| ಚೇತನಾ, ಸ್ವಾತಿ ಸಹನೆ, ಸಚಿನ್ ಎಸ್. ಭಟ್ ಇವರು ಕಾರ್ಯಾಗಾರ ನಡೆಸಿಕೊಟ್ಟರು. ಎಸ್.ಡಿ.ಎಂ ಆಸ್ಪತ್ರೆಯ ವಿಮಾ ವಿಭಾಗದ ಜಗನ್ನಾಥ್ ಎಂ. ಕಾರ್ಯಕ್ರಮ ನಿರೂಪಿಸಿದರು. ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ| ದೇವೇಂದ್ರ ಕುಮಾರ್. ಪಿ, ವೈದ್ಯಾಧಿಕಾರಿ ಡಾ| ಸಾತ್ವಿಕ್ ಜೈನ್ ಉಪಸ್ಥಿತರಿದ್ದರು.

News and Events

Related News