News and Events
ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ದಾದಿಯರ ದಿನಾಚರಣೆ
ಹಗಲು ರಾತ್ರಿ ಎನ್ನದೆ ಲ್ಯಾಂಪ್ ದೀಪ ಹಿಡಿದು ಗಾಯಗೊಂಡ ಸೈನಿಕರ ಸೇವೆ ಮಾಡುತ್ತಾ, ವಿಶ್ವವೇ ನೆನಪಿಡಬಹುದಾದ ರೀತಿಯಲ್ಲಿ ತನ್ನ ವೃತ್ತಿ ಜೀವನವನ್ನು ರೋಗಿಗಳ ಸೇವೆಗಾಗಿ ಮುಡಿಪಾಗಿಟ್ಟ ಫ್ಲೋರೆನ್ಸ್ ನೈಟಿಂಗೇಲ್ ಎಲ್ಲಾ ದಾದಿಯರಿಗೆ ಮಾದರಿಯಾಗಿದ್ದಾರೆ. ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯ ದಾದಿಯರು ಉತ್ತಮ ಸೇವೆ ನೀಡುವ ಮೂಲಕ ರೋಗಿಗಳ ಪ್ರಶಂಸೆಗೆ ಹಾಗೂ ಜನಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂದು ಉಜಿರೆ ಎಸ್.ಡಿ.ಎಂ ಆಸ್ಪತ್ರೆಯ ನಿರ್ದೇಶಕ ಎಂ. ಜನಾರ್ದನ್ ಹೇಳಿದರು.
ಅವರು ಮೇ.12ರಂದು ಉಜಿರೆ ಎಸ್.ಡಿ.ಎಂ ಆಸ್ಪತ್ರೆಯಲ್ಲಿ ಹಮ್ಮಿಕೊಳ್ಳಲಾದ ದಾದಿಯರ ದಿನಾಚರಣೆಯ ಕಾರ್ಯಕ್ರಮದಲ್ಲಿ ಪ್ರಸ್ತಾವಿಕದೊಂದಿಗೆ ಸ್ವಾಗತಿಸಿ ಮಾತನಾಡುತ್ತಾ, ಲ್ಯಾಂಪ್ ದೀಪದ ಬೆಳಕಿನಲ್ಲಿ ಫ್ಲೋರೆನ್ಸ್ ನೈಟಿಂಗೇಲ್ ಅವರು ರೋಗಿಗಳ ಪಾಲಿಗೆ ದೇವರಂತೆ ಕಂಡರು. ತ್ಯಾಗದೊಂದಿಗೆ ಸೇವೆ ನೀಡಿ ಅವರು ತೋರಿಸಿಕೊಟ್ಟ ಮಾನವೀಯತೆ, ಸೇವಾಮನೋಭಾವ ಇಂದಿನ ಎಲ್ಲಾ ದಾದಿಯರ ಕರ್ತವ್ಯ ನಿಷ್ಟೆಗೆ ಪ್ರೇರಣೆಯಾಗಿದೆ. ದಾದಿಯರ ಬಗ್ಗೆ ಅತೀ ಹೆಚ್ಚು ಕಾಳಜಿ ಹೊಂದಿರುವ ಶ್ರೀ ಕ್ಷೇತ್ರ ಧರ್ಮಸ್ಥಳದ ಹೆಗ್ಗಡೆ ದಂಪತಿಗಳು ಹಾಗೂ ಹರ್ಷೇಂದ್ರ ಕುಮಾರ್ ದಂಪತಿಗಳ ಶುಭಾಶೀರ್ವಾದ ದಾದಿಯರ ಪಾಲಿಗೆ ಸದಾ ಇದೆ ಎಂದರು.
ನರ್ಸಿಂಗ್ ಅಧೀಕ್ಷಕಿ ಶ್ರೀಮತಿ ಶೆರ್ಲಿ ದಾದಿಯರ ಪ್ರಮಾಣವಚನವನ್ನು ನೆರವೇರಿಸಿಕೊಟ್ಟರು. ಬಳಿಕ ತನ್ನ ಅನಿಸಿಕೆ ವ್ಯಕ್ತಪಡಿಸುತ್ತಾ, ಮಾನಸಿಕ, ದೈಹಿಕ ನೋವಿನಿಂದ ಬರುವ ರೋಗಿಗಳಿಗೆ ಅವರ ನೋವು ಅರಿತು ಸೇವೆ ನೀಡುವ ಜವಾಬ್ದಾರಿ ದಾದಿಯರಿಗಿದೆ. ಒಳ್ಳೆಯ ವಾತಾವರಣ, ಉತ್ತಮ ವೈದ್ಯವೃಂದ, ಒಳ್ಳೆಯ ಆಡಳಿತ ಮಂಡಳಿ, ಗೌರವಾನ್ವಿತ ಪೂಜ್ಯ ಹೆಗ್ಗಡೆ ಪರಿವಾರದವರ ಮಾರ್ಗದರ್ಶನ ಹೊಂದಿರುವ ಎಸ್.ಡಿ.ಎಂ ಆಸ್ಪತ್ರೆಯಲ್ಲಿ ದಾದಿಯರಾಗಿ ಕೆಲಸ ಮಾಡಲು ನಮಗೆ ಹೆಮ್ಮೆ ಅನಿಸುತ್ತಿದೆ ಎಂದರು.
ವೈದ್ಯಕೀಯ ಅಧೀಕ್ಷಕ ಡಾ| ದೇವೆಂದ್ರ ಕುಮಾರ್. ಪಿ ದಾದಿಯರಿಗೆ ಶುಭ ಹಾರೈಸಿದರು. ಡಯಾಲಿಸಿಸ್ ವಿಭಾಗದ ಇನ್-ಚಾರ್ಜ್ ಶ್ರೀಮತಿ ಪ್ರಮೀಳ, ದಾದಿಯರಾದ ಜಯಂತಿ ಬಿ. ಎಸ್, ಹಾಗೂ ವಿನೋಧ ತಮ್ಮ ಅನಿಸಿಕೆ ವ್ಯಕ್ತಪಡಿಸುತ್ತಾ, ದಾದಿಯರಾಗಿ ಸೇವೆ ಸಲ್ಲಿಸಲು ನಮಗೆ ತುಂಬಾ ಹೆಮ್ಮೆ ಅನಿಸುತ್ತಿದೆ. ಅದರಲ್ಲೂ ಉಜಿರೆಯ ಎಸ್.ಡಿ.ಎಂ ಆಸ್ಪತ್ರೆಯಲ್ಲಿ ಕೆಲಸ ಮಾಡುವುದು ತುಂಬಾ ಖುಷಿ ಕೊಟ್ಟಿದೆ. ಎಂದರು.
ಕಾರ್ಯಕ್ರಮದಲ್ಲಿ ನರ್ಸಿಂಗ್ ಅಧೀಕ್ಷಕಿ ಶ್ರೀಮತಿ ಶೆರ್ಲಿ ಇವರನ್ನು ಸನ್ಮಾನಿಸಲಾಯಿತು. ಎಲ್ಲಾ ದಾದಿಯರಿಗೆ ಉಡುಗೊರೆ ನೀಡಿ ಗೌರವಿಸಲಾಯಿತು. ತಮ್ಮ ಅತ್ಯುತ್ತಮ ಸೇವೆಯಿಂದ ಅತೀ ಹೆಚ್ಚು ರೋಗಿಗಳ ಪ್ರಶಂಸೆಗೆ ಒಳಗಾದ ನೇತ್ರಾ, ಸಂಧ್ಯಾ ಸಿ.ಪಿ, ಜಯಪ್ರಭಾ, ವನಿತ ಇವರಿಗೆ ಉಡುಗೊರೆ ನೀಡಿ ಗೌರವಿಸಲಾಯಿತು.
ವೈದ್ಯರುಗಳಾದ ಡಾ| ಸ್ವರ್ಣಲತಾ, ಡಾ| ಶತಾನಂದ ಪ್ರಸಾದ್, ಡಾ| ಸುಬಾಶ್ಚಂದ್ರ ಉಪಸ್ಥಿತರಿದ್ದರು. ನೇತ್ರಾ ಇವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮವನ್ನು ಜಗನ್ನಾಥ್ ಎಂ. ನಿರ್ವಹಿಸಿದರು. ನಾರಾಯಣ.ಬಿ ಧನ್ಯವಾದ ಅರ್ಪಿಸಿದರು. ಮಾನವ ಸಂಪನ್ಮೂಲ ವಿಭಾಗದ ಸೌಮ್ಯ. ಎನ್ ಹಾಗೂ ಚಿತ್ರಾ ಕೆ.ಎಸ್ ಸಹಕರಿಸಿದರು.