News and Events
ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಬೆಂಗಳೂರಿನ ಖ್ಯಾತ ಕರುಣಾಶ್ರಯ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರ ಭೇಟಿ
ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಬೆಂಗಳೂರಿನ ಖ್ಯಾತ ಕರುಣಾಶ್ರಯ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ, ರೊಟೇರಿಯನ್ ಡಾ| ನಾಗೇಶ್ ಸಿಂಹ ಭೇಟಿ ನೀಡಿದರು. ಕರುಣಾಶ್ರಯ ಆಸ್ಪತ್ರೆಯು ಗುಣಪಡಿಸುವ ವೈದ್ಯಕೀಯ ಚಿಕಿತ್ಸೆಯನ್ನು ಮೀರಿದ ಮುಂದುವರಿದ ಹಂತದ ಕ್ಯಾನ್ಸರ್ ರೋಗಿಗಳಿಗೆ ಉಚಿತವಾಗಿ ಗುಣಮಟ್ಟದ ಉಪಶಾಮಕ ಆರೈಕೆಯನ್ನು ಒದಗಿಸುವ ಸಂಸ್ಥೆಯಾಗಿದೆ.
ಕರುಣಾಶ್ರಯ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ| ನಾಗೇಶ್ ಸಿಂಹ ಅವರು ಎಲ್ಲಾ ವಿಭಾಗದ ಮುಖ್ಯಸ್ಥರನ್ನು ಉದ್ದೆಶಿಸಿ ಮಾತನಾಡುತ್ತಾ, ಸಹಾನುಭೂತಿ ಮತ್ತು ಅನುಭೂತಿಗಿಂತಲೂ ರೋಗಿಗಳ ಮೇಲೆ ಕರುಣೆ ಮುಖ್ಯ ಕರುಣೆ ಇದ್ದಲ್ಲಿ ಮಾತ್ರ ಉತ್ತಮ ಆರೋಗ್ಯ ಸೇವೆ ನೀಡಲು ಸಾಧ್ಯ. ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಕರುಣೆಯ ಕಾರಣವೇ ಇಂತಹ ಆಸ್ಪತ್ರೆ ಸ್ಥಾಪಿಸಲು ಪ್ರೇರಣೆಯಾಗಿರಬಹುದು. ಆರೋಗ್ಯ ರಕ್ಷಣೆಯಲ್ಲಿ ಚಿಕಿತ್ಸೆ ಅಥವಾ ಸಂಪೂರ್ಣ ಗುಣಪಡಿಸುವಿಕೆ ಸಾಧ್ಯವಾಗದಿದ್ದರೂ, ರೋಗಿಗಳಿಗೆ ಸೌಕರ್ಯ ಮತ್ತು ಬೆಂಬಲವನ್ನು ಒದಗಿಸುವುದು ಅತ್ಯಂತ ಮಹತ್ವಪೂರ್ಣವಾಗಿರುತ್ತದೆ. ಆಸ್ಪತ್ರೆಯಲ್ಲಿ ಔಷಧದ ವಾಸನೆ ಸಹಜ. ಆದರೆ ಇಲ್ಲಿ ಔಷಧಿü ಅಥವಾ ಇತರ ಯಾವುದೇ ಕೆಟ್ಟ ವಾಸನೆಗಳಿಲ್ಲದೆ ಆಸ್ಪತ್ರೆಯ ಆವರಣ ಅತ್ಯಂತ ಸುಚಿತ್ವದಿಂದ ಕೂಡಿದ್ದು, ಆರೋಗ್ಯಕರ ವಾತಾವರಣ ಮತ್ತು ಅತ್ಯಾಧುನಿಕ ಸೌಲಭ್ಯಗಳಿಂದ ರೋಗಿಗಳಿಗೆ ಅನುಕೂಲಕರವಾಗಿದೆ. ರೋಗಿಗಳಿಗೆ ಕರುಣೆಯ ಸ್ಪರ್ಶ ಇಲ್ಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್, ವೈದ್ಯಕೀಯ ಅಧೀಕ್ಷಕ ಡಾ| ದೇವೇಂದ್ರ ಕುಮಾರ್. ಪಿ, ಮುಖ್ಯ ವೈದ್ಯಾಧಿಕಾರಿ ಡಾ| ಸಾತ್ವಿಕ್ ಜೈನ್, ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಪೂರನ್ವರ್ಮ, ಕಾರ್ಯದರ್ಶಿ ಸಂದೇಶ್, ಆಸ್ಪತ್ರೆಯ ನರ್ಸಿಂಗ್ ಅಧೀಕ್ಷಕಿ ಶೆರ್ಲಿ ಮತ್ತು ಎಲ್ಲಾ ವಿಭಾಗದ ಮುಖ್ಯಸ್ಥರು ಉಪಸ್ಥಿತರಿದ್ದರು.




