Contact Mobile: 91 77603 97878, Land: 08256-295611/ 615/616

News and Events

ಉಜಿರೆ ಎಸ್.ಡಿ.ಎಂ ಆಸ್ಪತ್ರೆ: ಪಾದಯಾತ್ರಾರ್ಥಿಗಳಿಗೆ ಉಚಿತ ವೈದ್ಯಕೀಯ ಸೇವೆ

ಶಿವರಾತ್ರಿ ಸಂದರ್ಭದಲ್ಲಿ ನಾಡಿನ ಮೂಲೆ ಮೂಲೆಗಳಿಂದ ಭಕ್ತರು ಪಾದಯಾತ್ರೆಯ ಮೂಲಕ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿ, ಶ್ರೀ ಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ ಶಿವಜಾಗರಣೆಯಲ್ಲಿ ಪಾಲ್ಗೊಂಡು ಧನ್ಯರಾಗುತ್ತಾರೆ. ಪ್ರತಿ ವರ್ಷದಂತೆ ಈ ಬಾರಿಯೂ ಪಾದಯಾತ್ರೆಯಲ್ಲಿ ಆಗಮಿಸಿದ ಭಕ್ತರಿಗೆ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆಯ ವತಿಯಿಂದ ಮಾ. 7ರಿಂದ 12ರವರೆಗೆ ಉಚಿತ ವೈದ್ಯಕೀಯ ಸೇವೆ ನೀಡಲಾಯಿತು.
ಪಾದಯಾತ್ರಿಗಳ ಆರೋಗ್ಯ ರಕ್ಷಣೆ ಮತ್ತು ಸಹಾಯಕ್ಕೆ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆಯ ವತಿಯಿಂದ ಚಾರ್ಮಾಡಿ, ಸತ್ಯನಪಲ್ಕೆ, ಧರ್ಮಸ್ಥಳ, ಬೂಡುಜಾಲು, ಎಸ್.ಡಿ.ಎಂ ಡಿಎಡ್ ಕಾಲೇಜು, ಉಜಿರೆ ಎಸ್.ಡಿ.ಎಂ ಆಸ್ಪತ್ರೆ ಹಾಗೂ 2 ಆ್ಯಂಬ್ಯುಲೆನ್ಸ್‍ನಲ್ಲಿ 6 ದಿನಗಳವರೆಗೆ ಒಟ್ಟು 20622 ಪಾದಯಾತ್ರಾರ್ಥಿಗಳಿಗೆ ಆರೋಗ್ಯ ತಪಾಸಣೆ ಅಗತ್ಯವಿರುವ ಔಷಧಿ, ಮುಲಾಮು, ಸ್ಪ್ರೇ, ಬ್ಯಾಂಡೇಜ್ ಇತ್ಯಾದಿಗಳನ್ನು ಉಚಿತವಾಗಿ ಒದಗಿಸಲಾಯಿತು.
ಉಜಿರೆ ಎಸ್.ಡಿ.ಎಂ ಆಸ್ಪತ್ರೆಯ ತಜ್ಞ ವೈದ್ಯರ ತಂಡ ಹಾಗೂ ಬೆಂಗಳೂರಿನಿಂದ ಆಗಮಿಸಿದ 6 ಮಂದಿ ವೈದ್ಯರ ತಂಡ, ದಾದಿಯರು, ಸಹಾಯಕರು ಪಾದಯಾತ್ರಿಗಳ ಆರೋಗ್ಯ ರಕ್ಷಣೆಯಲ್ಲಿ ಸಹಕರಿಸಿದರು. ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆಯಲ್ಲಿ ಪಾದಯಾತ್ರಿಗಳಿಗೆ 24 ಗಂಟೆಯೂ ವೈದ್ಯಕೀಯ ಸೇವೆ ನೀಡಲಾಯಿತು.
ಪಾದಯಾತ್ರಿಗಳ ಸೇವೆ ಮಾಡುವ ಉದ್ದೇಶದಿಂದ ಬೆಂಗಳೂರಿನಿಂದ ಬಂದ ಡಾ| ಕೆ.ಎಲ್. ಪಂಚಾಕ್ಷಾರಿ, ಡಾ| ನಾಗರಾಜ್, ಡಾ| ರೇಣುಕಾ, ಡಾ| ಶೀತಲ್ ಶರ್ಮಾ, ಡಾ| ಮಂಜುನಾಥ, ಡಾ| ನಾಗಲಕ್ಷ್ಮೀ ಇವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆಯ ವೈದ್ಯರೊಂದಿಗೆ ಸೇರಿ ಪಾದಯಾತ್ರಿಗಳಿಗೆ ವೈದ್ಯಕೀಯ ಸೇವೆ ನೀಡಿದರು.

ವರದಿ: ನಾರಾಯಣ. ಬಿ

News and Events

Related News