News and Events
ಉಜಿರೆಯ ಎಸ್ .ಡಿ.ಎಂ ಆಸ್ಪತ್ರೆಯಲ್ಲಿ ಪರಿವರ್ತಿತ ಆರೋಗ್ಯ ರಕ್ಷಣೆ ತರಬೇತಿ
ಮೊದಲು ಆವಿಷ್ಕಾರ, ಬಳಿಕ ನಾವಿಣ್ಯತೆ–ಇದು ಪ್ರತೀಕ್ಷೇತ್ರದಲ್ಲಿಯೂ ನಡೆಯುತ್ತಿರುತ್ತದೆ. ವೈದ್ಯಕೀಯ ಕ್ಷೇತ್ರದಲ್ಲಿಯೂ ಪ್ರತಿದಿನ ಇನ್‍ವೆನ್ಶನ್/ಇನ್ನೋವೇಶನ್ (ಆವಿಷ್ಕಾರ/ನಾವಿಣ್ಯತೆ)ಗಳು ನಡೆಯುತ್ತಿದ್ದು, ವೈದ್ಯರು ಮತ್ತು ತಂತ್ರಜ್ಞರಿಗೆ ಇದರ ಅರಿವು ಇರಬೇಕಾಗುತ್ತದೆ. ಈ ಉದ್ದೇಶದಿಂದ ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆಯಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿಅಪಾರಜ್ಞಾನ ಇರುವ, ಅಂತರಾಷ್ಟ್ರೀಯ ಮಟ್ಟದಲ್ಲಿ ವಿವಿಧ ಕಾರ್ಯಾಗಾರಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ಖ್ಯಾತ ವೈದ್ಯರು ಮತ್ತು ಇಂಜಿನಿಯರಿಂಗ್ ಗಳಿಂದ ಪರಿವರ್ತಿತ ಆರೋಗ್ಯರಕ್ಷಣೆ ಎಂಬ ವಿಷಯದಲ್ಲಿ ತರಬೇತಿ ಕಾರ್ಯಾಗಾರ ನಡೆಸಲಾಯಿತು.
ಖ್ಯಾತರೆಹ್ಯಾಬ್ ಫಿಸಿಷಿಯನ್ ಡಾ| ಪ್ರತಿಭಾ ಶರಣ್, ವೈದ್ಯಕೀಯ ವೃತ್ತಿಯಲ್ಲಿ ತೊಡಗಿಸಿಕೊಂಡಿರುವವರು ಹೊಂದಿರಬೇಕಾದ ಗುಣಗಳನ್ನು ವಿವರಿಸಿ ಮಾತನಾಡಿ, ಆರೋಗ್ಯ ವೃತ್ತಿಪರರಿಗೆ ಇರಬೇಕಾದ ಕೌಶಲ್ಯತೆಗಳ ಬಗ್ಗೆ ವಿವರಿಸಿದರು. ನಾನು ಯಾರು?ನನ್ನ ಜವಾಬ್ದಾರಿಗಳೇನು? ನಾನು ಯಾಕೆ ಈ ಕೆಲಸ ಮಾಡಬೇಕು ಎಂಬ ಅರಿವಿನೊಂದಿಗೆ ಕರ್ತವ್ಯ ನಿರ್ವಹಿಸುವುದರೊಂದಿಗೆ ಸಹಾನುಭೂತಿ, ಉತ್ತಮ ಸಂವಹನ ಕಲೆ, ಶಿಸ್ತುಬದ್ಧ ವರ್ತನೆ, ರೋಗಿಗೆ ವಿಷಯ ಮನದಟ್ಟು ಮಾಡುವ ಕಲೆ, ಒಗ್ಗೂಡಿ ಕೆಲಸ ನಿರ್ವಹಿಸುವ ಮನೋಭಾವ, ವೃತ್ತಿಪರ ನೈತಿಕತೆ, ವೃತ್ತಿಕೌಶಲ್ಯತೆ, ಸಮಯ ಮತ್ತುಒತ್ತಡ ನಿರ್ವಹಣೆಗಳ ಬಗ್ಗೆ ಮನೋಜ್ಞವಾಗಿ ವಿವರಿಸಿದರು. ಅವರು ಉಜಿರೆ ಎಸ್.ಡಿ.ಎಂ ಆಸ್ಪತ್ರೆಯ ಶುಚಿತ್ವ ಮತ್ತು ವೈದ್ಯಕೀಯ ಸೇವೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
200ಕ್ಕೂ ಹೆಚ್ಚಿನ ವಿಶ್ವಮಟ್ಟದ ವೈದ್ಯಕೀಯ ಸಮ್ಮೇಳನಗಳಲ್ಲಿ ತನ್ನ ಪ್ರಬುದ್ಧ ಪ್ರಬಂಧ ಮಂಡಿಸಿದ ಹಾಗೂ 8000ಕ್ಕೂ ಹೆಚ್ಚಿನ ಮೆದುಳು ಮತ್ತು ಬೆನ್ನೆಲುಬುಗಳ ಮೇಜರ್ ಸರ್ಜರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ಖ್ಯಾತ ನರರೋಗ ಶಸ್ತ್ರಚಿಕಿತ್ಸಾ ತಜ್ಞರಾದ ಡಾ| ಶರಣ್ ಶ್ರೀನಿವಾಸನ್ ಇವರು ನರಮಂಡಲದ ಸಮಸ್ಯೆಗಳು, ರೋಗಲಕ್ಷಣಗಳು ಹಾಗೂ ವಿವಿಧ ಅತ್ಯಾಧುನಿಕ ಶಸ್ತ್ರಚಿಕಿತ್ಸೆಗಳ ಬಗ್ಗೆ ವಿವರಿಸಿದರು. ಪರಿಣಾಮಕಾರಿ ಸಂವಹನ ಕಲೆಯ ಬಗ್ಗೆ ಮಾತನಾಡಿದ ಅವರು ಅರ್ಧಂಬರ್ಧ ಕೇಳಿಸಿಕೊಳ್ಳುವುದರಿಂದ ಸಂಭವಿಸಬಹುದಾದ ಗಂಭೀರ ಅವಘಡಗಳ ಬಗ್ಗೆ ವಿವರಿಸುತ್ತಾ, ವೈದ್ಯರ ಮಾತನ್ನುತಪ್ಪಾಗಿ ಕೇಳಿಸಿಕೊಂಡ ನರ್ಸ್ ಗ್ಯಾಸ್ಟ್ರಿಕ್ ರೋಗಿಗೆ ರ್ಯಾಬೆಟ್ ಬದಲು ಲ್ಯಾಬೆಟ್ ನೀಡಿದರೆ ಪರಿಣಾಮ ಏನಾಗಬಹುದು ಎಂದು ಹಾಸ್ಯಭರಿತವಾಗಿ ತಿಳಿಸಿದರು.
ಖ್ಯಾತಇಂಜಿನಿಯರ್ ಉದಯ ಬಿರ್ಜೆಯವರು ಆರೋಗ್ಯರಕ್ಷಣೆಯಲ್ಲಿ ಹೊಸತನದ ಪ್ರವೃತ್ತಿಗಳು ಎಂಬ ವಿಷಯದ ಬಗ್ಗೆ ಮಾತನಾಡಿ ಆವಿಷ್ಕಾರ ಮತ್ತು ನಾವಿಣ್ಯತೆಗಳ ಪ್ರಾಮುಖ್ಯತೆಯನ್ನು ತಿಳಿಸಿದರು.
ಭಾರತದ ಗ್ರಾಮೀಣ ಪ್ರದೇಶದಲ್ಲಿಆರೋಗ್ಯರಕ್ಷಣೆ ಎಂಬ ವಿಷಯದಲ್ಲಿ ಉಜಿರೆ ಎಸ್.ಡಿ.ಎಂ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷರಾದ ಡಾ| ರಂಜನ್ ಕುಮಾರ್ ಮಾತನಾಡಿದರು. ಪರಿವರ್ತನೆಯಿಂದ ಆರೋಗ್ಯ ಸೇವೆಯ ಮೇಲೆ ಪರಿಣಾಮ ಎಂಬ ವಿಷಯದಲ್ಲಿ ಸ್ವಸ್ತ್ಯ ಟ್ರಾನ್ಸ್‍ಫಾರ್ಮೇಶನ್ ಸೊಲ್ಯೂಶನ್ಸ್ ಇದರ ನಿರ್ದೇಶಕರಾದ ವಿಕಾಶ್‍ಗೋಯಲ್ ವಿವರಿಸಿದರು.
ಸ್ವಸ್ತ್ಯ ಟ್ರಾನ್ಸ್‍ಫಾರ್ಮೇಶನ್ ಸೊಲ್ಯೂಶನ್ಸ್ ಇದರ ನಿರ್ದೇಶಕರಾದ ಸೂರ್ಯನಾರಾಯಣನ್, ವಿಜಯ ಪ್ರಸಾದ್ ಹಾಗೂ ಉಜಿರೆ ಎಸ್.ಡಿ.ಎಂ ಆಸ್ಪತ್ರೆಯ ವೈದ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಎಸ್.ಡಿ.ಎಂ ಆಸ್ಪತ್ರೆಯ ನಿರ್ದೇಶಕರಾದ ಜನಾರ್ಧನ್ ಎಂ ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಡಾ| ಉಷಾ ಜಿ ಶೆಟ್ಟಿಕಾರ್ಯಕ್ರಮ ನಿರೂಪಿಸಿದರು. ನರ್ಸಿಂಗ್ ಅಧೀಕ್ಷಕಿ ಶೆರ್ಲಿ ವಂದನಾರ್ಪಣೆ ಮಾಡಿದರು.ತರಬೇತಿಯಲ್ಲಿ ಭಾಗವಹಿಸಿದ ಎಲ್ಲರಿಗೂ ಸರ್ಟಿಫಿಕೆಟ್ ವಿತರಿಸಲಾಯಿತು.ತರಬೇತಿ ಪಡೆದ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದರು.