News and Events
ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಡಾ| ಎಲ್.ಹೆಚ್ ಮಂಜುನಾಥ್ ಅವರಿಗೆ ಸನ್ಮಾನ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ 23 ವರ್ಷಗಳ ಕಾಲ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ಡಾ| ಎಲ್.ಹೆಚ್ ಮಂಜುನಾಥ್ ಅವರನ್ನು ದಂಪತಿ ಸಹಿತ ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್ ಮಾತನಾಡುತ್ತಾ, ದುರ್ಬಲ ವರ್ಗದವರ ಏಳಿಗೆಗಾಗಿ ಪ್ರಾರಂಭಗೊಂಡ ಪೂಜ್ಯ ಹೆಗ್ಗಡೆಯವರ ಮಹಾತ್ವಾಕಾಂಕ್ಷೆಯ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯನ್ನು ಬೆಳ್ತಂಗಡಿ ತಾಲೂಕಿನಿಂದ ಕರ್ನಾಟಕ ರಾಜ್ಯಕ್ಕೆ ವಿಸ್ತರಿಸಿದವರು ಡಾ. ಎಲ್ ಹೆಚ್ ಮಂಜುನಾಥ್ರವರು. ಅವಕಾಶ ಸಿಕ್ಕರೆ ಭಾರತದಾತ್ಯಂತ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯನ್ನು ವಿಸ್ತರಿಸಲು ಸಮರ್ಥರಾಗಿದ್ದ ಡಾ. ಎಲ್ ಹೆಚ್ ಮಂಜುನಾಥ್ರವರು ಸಂಘಟನಾ ಚತುರರು. ಇವರು 45 ಸಾವಿರ ಕಾರ್ಯಕರ್ತರ ಪ್ರೀತಿ ವಿಶ್ವಾಸ ಗಳಿಸಿದ್ದಾರೆ. ಲಕ್ಷಾಂತರ ಬಡ ಕುಟುಂಬಗಳ ನೋವಿಗೆ ಸ್ಪಂಧಿಸಿದ್ದಾರೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ| ಎಲ್ ಹೆಚ್ ಮಂಜುನಾಥ್, ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೂ ತನಗೂ ಅವಿನಾಭಾವ ಸಂಬಂಧವಿದೆ. ತನ್ನ ತಾಯಿಯ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಆಸ್ಪತ್ರೆಯ ಸೇವೆಯನ್ನು ಸ್ಮರಿಸಿದ ಅವರು ಆಸ್ಪತ್ರೆ ಪ್ರಾರಂಭದಲ್ಲಿ ಅನೇಕ ಸವಾಲುಗಳನ್ನು ಎದುರಿಸಿ ಹಂತ ಹಂತವಾಗಿ ಬೆಳೆದು, ರೋಗಿಗಳಿಗೆ ಅತ್ಯುತ್ತಮ ವೈದ್ಯಕೀಯ ಸೇವೆ ನೀಡುತ್ತಿದೆ. ಅನೇಕ ಕ್ಲಷ್ಟಕರ ಶಸ್ತ್ರಚಿಕಿತ್ಸೆಗಳು ಇದೀಗ ಉಜಿರೆಯ ಈ ಗ್ರಾಮೀಣ ಆಸ್ಪತ್ರೆಯಲ್ಲಿ ಪೂಜ್ಯ ಹೆಗ್ಗಡೆಯವರ ಸಹಕಾರದಿಂದ ಮಿತದರದಲ್ಲಿ ದೊರೆಯುತ್ತಿರುವುದು ಸಂತಸ ತಂದಿದೆ.
ಪೂಜ್ಯ ಹೆಗ್ಗಡೆಯವರ ಪ್ರಭಾವಳಿ, ಮಂಜುನಾಥ ಸ್ವಾಮಿಯ ಆಶೀರ್ವಾದ, ಅಣ್ಣಪ್ಪ ಸ್ವಾಮಿಯ ಬೆಂಗಾವಲು ಇದ್ದರೆ ನಾವು ಏನನ್ನು ಸಾಧಿಸಬಹುದು. ಶ್ರೀ ಕ್ಷೇತ್ರ ಧರ್ಮಸ್ಥಳದ ಸಂಸ್ಥೆಗಳಲ್ಲಿ ದುಡಿಯುವ ನಾವೆಲ್ಲರೂ ಅಣ್ಣಪ್ಪ ಸ್ವಾಮಿ ನಮಗೆ ಬೆಂಗಾವಲಾಗಿ ಇರುತ್ತಾನೆ ಎಂಬ ವಿಶ್ವಾಸದಿಂದ ದುಡಿಯಬೇಕು. ಎಂ. ಜನಾರ್ದನ್ ಅವರ ವಿಶೇಷ ಚಿಂತನೆ ಮತ್ತು ಯೋಚನೆಗಳಿಂದ ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಅತ್ಯಾಧುನಿಕ ವೈದ್ಯಕೀಯ ಸೇವೆ ದೊರೆಯುತ್ತಿದೆ. ಈಗಾಗಲೇ ಚಿಕ್ಕಮಗಳೂರು ಬೆಂಗಳೂರಿನಿಂದಲೂ ರೋಗಿಗಳು ಈ ಆಸ್ಪತ್ರೆಗೆ ವಿಶ್ವಾಸದಿಂದ ಬರುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಈ ಆಸ್ಪತ್ರೆಯಿಂದ ಇನ್ನೂ ಹೆಚ್ಚಿನ ಜನತೆಗೆ ಇನ್ನಷ್ಟು ಅತ್ಯಾಧುನಿಕ ಸೇವೆ ದೊರೆಯುಂತಾಗಲಿ ಎಂದರು.
ಡಾ| ಎಲ್ ಹೆಚ್ ಮಂಜುನಾಥ್ ಅವರ ಪತ್ನಿ ನಳಿನಿ, ಮಗ ಡಾ| ರೋಹನ್, ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ| ದೇವೇಂದ್ರ ಕುಮಾರ್. ಪಿ, ಮುಖ್ಯವೈದ್ಯಾಧಿಕಾರಿ ಡಾ| ಸಾತ್ವಿಕ್ ಜೈನ್, ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಆಸ್ಪತ್ರೆಯ ವೈದ್ಯರು, ಸಿಬ್ಬಂದಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಜಗನ್ನಾಥ್ ಎಂ. ನಿರ್ವಹಿಸಿದರು. ಮಾನವ ಸಂಪನ್ಮೂಲ ವಿಭಾಗದ ಸೌಮ್ಯ. ಎನ್ ಹಾಗೂ ಶ್ವೇತಾ ಎಂ ಸಹಕರಿಸಿದರು.